
ಬೆಂಗಳೂರು: ಕರ್ನಾಟಕದ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ಗಳು ಇನ್ನು ಮುಂದೆ ತಮ್ಮದೇ ಆದ ಪ್ರತ್ಯೇಕ ಲಾಂಛನ (ಲೋಗೋ) ಮತ್ತು ಮೊಹರು (ಸೀಲ್) ಹೊಂದಲು ಅವಕಾಶ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಇರುವಂತೆಯೇ, ಸ್ಥಳೀಯ ಸ್ವಾಯತ್ತ ಸರ್ಕಾರಗಳು ಎಂಬ ನೆಲೆಯಲ್ಲಿ ಪಂಚಾಯತ್‌ಗಳಿಗೂ ಪ್ರತ್ಯೇಕ ಲಾಂಛನ ಬೇಕು ಎಂಬ ಬಹುಕಾಲದ ಬೇಡಿಕೆ ಕೊನೆಗೂ ಈಡೇರಿದೆ. ಗ್ರಾಮೀಣ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್‌ಗಳಿಗೆ ಇದುವರೆಗೆ ಒಂದೇ ರೀತಿಯ ಗುರುತು ಇತ್ತು.
ಕಾನೂನು ಬದ್ಧತೆ ಮತ್ತು ಉದ್ದೇಶ
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 6ರಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿ ಸ್ವಾಯತ್ತ ಅಧಿಕಾರ ಹೊಂದಿದೆ. ಪಂಚಾಯಿತಿ ಶಾಶ್ವತ ಉತ್ತರಾಧಿಕಾರ ಹೊಂದಿರುವುದರಿಂದ ಪ್ರತ್ಯೇಕ ಲಾಂಛನ, ಮೊಹರು ಹೊಂದಲು ಅವಕಾಶ ನೀಡಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಸಂವಿಧಾನದ 73ನೇ ತಿದ್ದುಪಡಿ ಉದ್ದೇಶವನ್ನು ಈಡೇರಿಸಲು ಮತ್ತು ಜನರು ಗ್ರಾಮ ಸ್ವರಾಜ್ ಸ್ಥಳೀಯ ಸ್ವಯಂ ಆಡಳಿತದ ಘಟಕಗಳಲ್ಲಿ ಕಾರ್ಯನಿರ್ವಹಿಸಲು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಈ ಮೂರು ಹಂತದ ಸಂಸ್ಥೆಗಳಾದ ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್‌ಗಳಿಗೆ ಅಧಿಕೃತ ಮುದ್ರೆ ಮತ್ತು ವಿನ್ಯಾಸದಲ್ಲಿ ಅರ್ಥಪೂರ್ಣವಾದ ಪ್ರತ್ಯೇಕ ಲಾಂಛನಗಳನ್ನು ತಯಾರಿಸಲಾಗಿದೆ. ಇದರ ಬಳಕೆಗೆ ಸಂಬಂಧಿಸಿದಂತೆ ಕೆಲವು ಮಾರ್ಗಸೂಚಿಗಳನ್ನು ಸಹ ಸರ್ಕಾರ ನೀಡಿದೆ.