
ಬೆಂಗಳೂರು: ರಾಜ್ಯ ಸರ್ಕಾರದ ಅಬಕಾರಿ ನೀತಿ ಹಾಗೂ ಇಲಾಖೆಯ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದಿರುವ ಮದ್ಯ ಮಾರಾಟಗಾರರು, ತಮ್ಮ ಬೇಡಿಕೆಗಳು ಈಡೇರದಿದ್ದರೆ ಮಾರ್ಚ್ 16 ರಂದು ಕರ್ನಾಟಕದಾದ್ಯಂತ ಬಾರ್ ಮತ್ತು ಮದ್ಯದಂಗಡಿಗಳನ್ನು ಬಂದ್ ಮಾಡುವುದಾಗಿ ಘೋಷಿಸಿದ್ದಾರೆ. ಫೆಡರೇಷನ್ ಆಫ್ ವೈನ್ ಮರ್ಚೆಂಟ್ ಅಸೋಸಿಯೇಷನ್ ನೇತೃತ್ವದಲ್ಲಿ ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ನೂರಾರು ಸನ್ನದುದಾರರು ಭಾಗವಹಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಸುಮಾರು 579 ಮದ್ಯ ಸನ್ನದುಗಳನ್ನು (CL-2, CL-9, CL-11) ಹರಾಜು ಮಾಡುವ ಸರ್ಕಾರದ ಪ್ರಸ್ತಾವನೆಯನ್ನು ಕೂಡಲೇ ಕೈಬಿಡಬೇಕು ಮತ್ತು ಚಿಲ್ಲರೆ ಮದ್ಯ ಮಾರಾಟದ ಮೇಲೆ ಶೇ. 20 ರಷ್ಟು ಲಾಭಾಂಶ ನೀಡಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಆಗ್ರಹವಾಗಿದೆ. ಅಬಕಾರಿ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ, ದೀರ್ಘಕಾಲದಿಂದ ನವೀಕರಣಗೊಳ್ಳದ ಸನ್ನದುಗಳನ್ನು ಹಣ ಸಂಗ್ರಹಿಸುವ ಉದ್ದೇಶದಿಂದ ಹರಾಜಿಗೆ ಇಟ್ಟಿದ್ದಾರೆ ಎಂದು ಸಂಘದ ಅಧ್ಯಕ್ಷ ಎಸ್. ಗುರುಸ್ವಾಮಿ ಕಿಡಿಕಾರಿದರು. ಇಲಾಖೆಯಲ್ಲಿ ಮಿತಿಮೀರಿರುವ ಲಂಚಗುಳಿತನಕ್ಕೆ ಕಡಿವಾಣ ಹಾಕಬೇಕು ಮತ್ತು ಅಬಕಾರಿ ಸಚಿವರ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಮನವಿ ಸ್ವೀಕರಿಸಿ, ಊರ್ಜಿತದಲ್ಲಿರುವ ಸನ್ನದುಗಳನ್ನು ಹರಾಜು ಪ್ರಕ್ರಿಯೆಯಿಂದ ಕೈಬಿಡುವ ಭರವಸೆ ನೀಡಿದರು. ಭ್ರಷ್ಟಾಚಾರ ನಡೆಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಮತ್ತು 5 ವರ್ಷಕ್ಕೊಮ್ಮೆ ಪರವಾನಗಿ ನವೀಕರಣಕ್ಕೆ ಅವಕಾಶ ನೀಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಮಾರ್ಚ್ 14 ರೊಳಗೆ ಸನ್ನದುದಾರರೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸದಿದ್ದರೆ ಮಾರ್ಚ್ 16 ರಂದು ರಾಜ್ಯವ್ಯಾಪಿ ಮದ್ಯ ಬಂದ್ ಅನಿವಾರ್ಯ ಎಂದು ಸಂಘಟನೆ ಎಚ್ಚರಿಸಿದೆ.



































