
ಬಜಗೋಳಿ : ಕಾರ್ಕಳ ತಾಲೂಕಿನ ಬಜಗೋಳಿ ಸಮೀಪದ ಮುಡ್ರಾಲು ಕ್ರಾಸ್‌ನಲ್ಲಿ ವಿದ್ಯುತ್ ಕಂಬ ಅಳವಡಿಸುವ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕನೊಬ್ಬ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಮೃತ ಯುವಕ ಅಸ್ಸಾಂ ಮೂಲದವನೆಂದು ಗುರುತಿಸಲಾಗಿದ್ದು, ಗುತ್ತಿಗೆದಾರರ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.
ಸುಮಾರು 11 ಮೀಟರ್ ಎತ್ತರದ ಬೃಹತ್ ವಿದ್ಯುತ್ ಕಂಬವನ್ನು ಏರಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಮಳೆ ಆರಂಭವಾಗಿದೆ. ಈ ವೇಳೆ ಸಂಭವಿಸಿದ ಭೀಕರ ಸಿಡಿಲಿನ ಆಘಾತದಿಂದಾಗಿ ಯುವಕ ನಿಯಂತ್ರಣ ತಪ್ಪಿ ನೇರವಾಗಿ ನೆಲಕ್ಕೆ ಅಪ್ಪಳಿಸಿದ್ದಾನೆ. ತೀವ್ರವಾಗಿ ಗಾಯಗೊಂಡ ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಕಾರ್ಮಿಕನ ಕುಟುಂಬಕ್ಕೆ ಮಾಹಿತಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ.



































