
ಕಾರ್ಕಳ ತಾಲೂಕಿನಲ್ಲಿ ತೀವ್ರ ದುಃಖಕರ ಘಟನೆಯೊಂದು ವರದಿಯಾಗಿದೆ. ಬೆಳ್ಮಣ್ಣಿನಲ್ಲಿರುವ ಖಾಸಗಿ ಲಾಡ್ಜ್‌ವೊಂದರಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಕಾರಣ ಗೆಳೆಯರಿಂದ ಬಂದಿದ್ದ ಬ್ಲ್ಯಾಕ್‌ಮೇಲ್ ಎಂದು ತಿಳಿದುಬಂದಿದೆ.
ಮೃತರನ್ನು ನಿಟ್ಟೆ ಗ್ರಾಮದ ನಿವಾಸಿ ಅಭಿಷೇಕ್ ಆಚಾರ್ಯ (23) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ಬರೆದಿರುವ ಡೆತ್ ನೋಟ್‌ನಲ್ಲಿ ನಾಲ್ವರು ಗೆಳೆಯರು ತನಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎಂದು ಅಭಿಷೇಕ್ ಉಲ್ಲೇಖಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಅಭಿಷೇಕ್ ಅವರು ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಇರುವ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಈ ನಾಲ್ವರು ಬೆದರಿಕೆ ಹಾಕಿದ್ದರು. ಈ ಒತ್ತಡವನ್ನು ತಾಳಲಾರದೆ ಅಭಿಷೇಕ್ ಅವರು ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.
ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಮೃತರ ಮೊಬೈಲ್ ಕರೆಗಳ ವಿವರಗಳು ಮತ್ತು ಇತರೆ ತಾಂತ್ರಿಕ ಆಯಾಮಗಳನ್ನು ಪರಿಶೀಲಿಸುತ್ತಿದ್ದಾರೆ. ಡೆತ್ ನೋಟ್‌ನಲ್ಲಿ ಹೆಸರಿಸಲಾದ ನಾಲ್ವರು ಆರೋಪಿಗಳನ್ನು ಪೊಲೀಸರು ಈಗಾಗಲೇ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯಕ್ಕೆ, ಹೆಚ್ಚಿನ ವಿವರಗಳು ತನಿಖೆಯ ನಂತರ ಹೊರಬೀಳುವ ಸಾಧ್ಯತೆ ಇದೆ.