
ಕಾರ್ಕಳ: ವಿಶ್ವವಿಖ್ಯಾತ ಬಾಹುಬಲಿ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಕಾರ್ಕಳದ ಮೂಲಸೌಕರ್ಯಗಳಿಗೆ ಹೊಸ ಕಳೆ ನೀಡಲು ಶಾಸಕ ವಿ. ಸುನಿಲ್ ಕುಮಾರ್ ಮುಂದಾಗಿದ್ದಾರೆ. ಪಟ್ಟಣದ ಪ್ರಮುಖ ಕೇಂದ್ರವಾದ ಸರ್ವಜ್ಞ ವೃತ್ತ ಮತ್ತು ಅದರ ಆಸುಪಾಸಿನ ಪ್ರದೇಶಗಳನ್ನು ಸುಮಾರು 3 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಮಾರ್ಚ್ 3 ರಂದು ಜೈನ್ ಹೋಟೆಲ್ ಸಮೀಪ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಶಾಸಕರು, ಕಾಮಗಾರಿಯ ನೀಲನಕಾಶೆಯ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿದರು. ಈ ಯೋಜನೆಯಡಿ ಮುಖ್ಯವಾಗಿ ಸಾಲ್ಮರದಿಂದ ಸರ್ವಜ್ಞ ವೃತ್ತದವರೆಗಿನ ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗುವುದು. ಕೇವಲ ರಸ್ತೆ ನಿರ್ಮಾಣಕ್ಕೆ ಸೀಮಿತವಾಗದೆ, ವೈಜ್ಞಾನಿಕವಾಗಿ ಚರಂಡಿ ವ್ಯವಸ್ಥೆ, ಸಾರ್ವಜನಿಕರ ಸಂಚಾರಕ್ಕೆ ಸುಸಜ್ಜಿತ ಫುಟ್‌ಪಾತ್ ಹಾಗೂ ರಾತ್ರಿ ವೇಳೆಯ ಸುರಕ್ಷತೆಗಾಗಿ ಆಕರ್ಷಕ ದಾರಿದೀಪಗಳನ್ನು ಅಳವಡಿಸಲು ಸೂಚನೆ ನೀಡಲಾಗಿದೆ.

ನಗರದ ಸೌಂದರ್ಯೀಕರಣಕ್ಕೆ ಆದ್ಯತೆ: “ಸರ್ವಜ್ಞ ವೃತ್ತದ ಸುತ್ತಮುತ್ತಲಿನ ಪರಿಸರವನ್ನು ಮತ್ತಷ್ಟು ಸುಂದರಗೊಳಿಸುವುದು ನಮ್ಮ ಗುರಿ. ತಾಲೂಕು ಕಚೇರಿ ಹಾಗೂ ವಾಜಪೇಯಿ ಪಾರ್ಕ್ ಆವರಣವನ್ನು ಈ ಯೋಜನೆಯಡಿ ಅಭಿವೃದ್ಧಿಪಡಿಸಿ, ಭಕ್ತಾದಿಗಳಿಗೆ ಮತ್ತು ಪ್ರವಾಸಿಗರಿಗೆ ಉತ್ತಮ ಅನುಭವ ನೀಡಲಾಗುವುದು” ಎಂದು ಸುನಿಲ್ ಕುಮಾರ್ ಈ ಸಂದರ್ಭದಲ್ಲಿ ತಿಳಿಸಿದರು.
ಈ ಮಹತ್ವದ ಸಮಾಲೋಚನೆಯಲ್ಲಿ ಲೋಕೋಪಯೋಗಿ ಇಂಜಿನಿಯರ್ ಸೋಮಶೇಖರ್, ಪ್ರಮುಖರಾದ ಅರುಣ್ ನಿಟ್ಟೆ, ರಾಕೇಶ್ ಶೆಟ್ಟಿ ಕುಕ್ಕುಂದೂರು, ಗುಣಪಾಲ್ ಜೈನ್, ರಾಜೇಶ್ ರಾವ್ ಪರಪು, ಚಂದ್ರಶೇಖರ್ ಮೂಲ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.



































