
ಮುಂಬೈ: ಇದೇ ತಿಂಗಳ ಆರಂಭದಲ್ಲಿ (ಅ. 02) ಬಿಡುಗಡೆಯಾಗಿ ವಿಶ್ವಾದ್ಯಂತ ದೊಡ್ಡ ಮಟ್ಟದ ಯಶಸ್ಸು ಮತ್ತು ದಾಖಲೆಯನ್ನು ಕಂಡಿರುವ ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಸಿನಿಮಾ ‘ಕಾಂತಾರ: ಚಾಪ್ಟರ್ 1’ (Kantara: Chapter 1) ಇದೀಗ ಓಟಿಟಿಗೆ ಬರಲು ಸಜ್ಜಾಗಿದೆ.
ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿರುವ ಈ ಚಿತ್ರ ಥಿಯೇಟರ್‌ನಲ್ಲಿ ಬಿಡುಗಡೆಯಾದ ಒಂದು ತಿಂಗಳೊಳಗೆ ಅಂದರೆ, ಅಕ್ಟೋಬರ್ 31 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದ ಓಟಿಟಿ ಹಕ್ಕನ್ನು ಪ್ರೈಮ್ ಬರೋಬ್ಬರಿ 125 ಕೋಟಿ ರೂಪಾಯಿಗೆ ತನ್ನ ತೆಕ್ಕೆಗೆ ಹಾಕಿಕೊಂಡಿದೆ ಎಂದು ವರದಿಯಾಗಿದೆ.
ಚಿತ್ರದ ವಿಶೇಷ ಮತ್ತು ಗಳಿಕೆ
ಮೊದಲ ‘ಕಾಂತಾರ’ ಚಿತ್ರವು ಭಾರಿ ಯಶಸ್ಸು ಕಂಡ ಕಾರಣ ರಿಷಬ್ ಶೆಟ್ಟಿ ಅವರು ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದರು. ಈ ಚಿತ್ರದಲ್ಲಿ ಶಿವ ಎಂಬ ಪಾತ್ರದ ಬದಲಿಗೆ ‘ಬೆರ್ಮೆ’ ಎಂಬ ಪಾತ್ರದಲ್ಲಿ ನಟಿಸಿದ್ದು, ಸಾವಿರ ವರ್ಷಗಳಿಗೂ ಹಿಂದಿನ ಕಥಾನಕ, ಆಗಿನ ಕಾಲದ ಆಚರಣೆ, ದೈವ-ದೇವರ ನಡುವಿನ ಕಥೆಯನ್ನು ಹೇಳಲಾಗಿದೆ.
ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್, ಜಯರಾಮ್, ಗುಲ್ಶನ್ ದೇವಯ್ಯ ಸೇರಿದಂತೆ ಹಲವರು ನಟಿಸಿದ್ದಾರೆ.
ಚಿತ್ರವು ಥಿಯೇಟರ್‌ಗಳಲ್ಲಿ ಮುನ್ನುಗ್ಗುತ್ತಿರುವಾಗಲೇ ಓಟಿಟಿಗೆ ಬರುತ್ತಿದ್ದು, ಇದುವರೆಗೆ ವಿಶ್ವಾದ್ಯಂತ ₹800 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಹಿಂದಿ ಆವೃತ್ತಿಯು ಒಂದೇ ₹200 ಕೋಟಿ ರೂ. ಸಂಪಾದಿಸಿದೆ. ‘ಕಾಂತಾರ: ಚಾಪ್ಟರ್ 1’ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.



































