
ಮುಂಬಯಿ: ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ರಿಷಬ್ ಶೆಟ್ಟಿ ನಟನೆಯ ‘ಕಾಂತಾರ: ಚಾಪ್ಟರ್ 1’ (Kantara: Chapter 1) ಚಿತ್ರವು ಬಿಡುಗಡೆಗೆ ದಿನಗಣನೆ ನಡೆಸುತ್ತಿದ್ದು, ಮುಂಗಡ ಬುಕಿಂಗ್‌ನಲ್ಲಿ ಹಿಂದಿ ಚಿತ್ರವನ್ನು ಮೀರಿ ಭಾರಿ ಮುನ್ನಡೆ ಸಾಧಿಸಿದೆ.
ಸಾಮಾನ್ಯವಾಗಿ ದೊಡ್ಡ ಚಿತ್ರಗಳ ಎದುರು ಬೇರೆ ಸಿನಿಮಾಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರು ಹಿಂದೇಟು ಹಾಕುತ್ತಾರೆ. ಆದರೆ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಕಾಂತಾರ -1’ ಜತೆಗೇ ಹಿಂದಿಯ ಮತ್ತೊಂದು ಬಹುನಿರೀಕ್ಷಿತ ಚಿತ್ರ ಬಿಡುಗಡೆಯಾಗುತ್ತಿದೆ. ವರುಣ್ ಧವನ್ ಮತ್ತು ಜಾಹ್ನವಿ ಕಪೂರ್ ಅಭಿನಯದ ‘ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ’ ಅಕ್ಟೋಬರ್ 2ರಂದೇ ತೆರೆಗೆ ಬರುತ್ತಿದೆ.
ಅಡ್ವಾನ್ಸ್ ಬುಕಿಂಗ್‌ನಲ್ಲಿ ಕದನ
ಶಶಾಂಕ್ ಖೈತಾನ್ ನಿರ್ದೇಶನದ ‘ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ’ (ಧರ್ಮ ಪ್ರೊಡಕ್ಷನ್ಸ್) ಚಿತ್ರದ ಮುಂಗಡ ಬುಕಿಂಗ್ ಓಪನ್ ಆಗಿದೆ. ‘ಸಾಕ್ನಿಲ್ಕ್’ ವರದಿಯ ಪ್ರಕಾರ, ಈ ಚಿತ್ರದ ಇಲ್ಲಿಯವರೆಗೆ 5,182 ಟಿಕೆಟ್‌ಗಳು ಮಾರಾಟವಾಗಿವೆ (ಬ್ಲಾಕ್ ಸೀಟುಗಳನ್ನು ಹೊರತುಪಡಿಸಿ).
ಇದಕ್ಕೆ ಪ್ರತಿಯಾಗಿ, ‘ಕಾಂತಾರ -1’ನ ಹಿಂದಿ ವರ್ಷನ್‌ನಲ್ಲಿ 10,503 ಟಿಕೆಟ್‌ಗಳು ಮಾರಾಟವಾಗಿವೆ. ಪ್ರತಿ ನಿಮಿಷಕ್ಕೂ ‘ಕಾಂತಾರ -1’ನ ಹಿಂದಿ ಆವೃತ್ತಿಯ ಟಿಕೆಟ್ ಮಾರಾಟ ಹೆಚ್ಚಾಗುತ್ತಿರುವುದರಿಂದ, ಇದು ವರುಣ್ ಧವನ್ ಸಿನಿಮಾಕ್ಕಿಂತ ಅಡ್ವಾನ್ಸ್ ಬುಕಿಂಗ್‌ನಲ್ಲಿ ಭಾರಿ ಮುನ್ನಡೆ ಸಾಧಿಸಿದೆ.
‘ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ’ ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ ಮತ್ತು ರೋಹಿತ್ ಸರಾಫ್ ಮುಂತಾದವರು ನಟಿಸಿದ್ದರೆ, ‘ಕಾಂತಾರ ಚಾಪ್ಟರ್ -1’ ನಲ್ಲಿ ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ಜಯರಾಮ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ.



































