
ಕಣಜಾರು : ಬೇಟೆಯ ವೇಳೆ ಗುಂಡು ಹಾರಿಸಿ ಅದು ಕಾರು ಮತ್ತು ಮನೆಯ ಬಾಗಿಲಿಗೆ ತಗುಲಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯಡ್ಕ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೆಪ್ಟೆಂಬರ್ 10ರಂದು ನಡೆದ ಈ ಕಾರ್ಯಾಚರಣೆಯಲ್ಲಿ ಕುದಿ ಗ್ರಾಮದ ಪ್ರದೀಪ್ (32) ಮತ್ತು ಹಿರಿಯಡ್ಕ ಗುಡ್ಡೆಯಂಗಡಿಯ ಮನೋಜ್ (25) ಅವರನ್ನು ಬಂಧಿಸಲಾಗಿದೆ.
ಪರವಾನಿಗೆ ಇಲ್ಲದ ಬಂದೂಕು ವಶಕ್ಕೆ
ಬಂಧಿತರಿಂದ ಸುಮಾರು ₹50,000 ಮೌಲ್ಯದ ಪರವಾನಿಗೆರಹಿತ ನಾಡಬಂದೂಕು, ಏಳು ಗುಂಡುಗಳು ಹಾಗೂ ₹40,000 ಮೌಲ್ಯದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣದ ಹಿನ್ನಲೆ
ಸೆಪ್ಟೆಂಬರ್ 1ರ ನಸುಕಿನ ವೇಳೆಯಲ್ಲಿ ಕಣಜಾರು ಗ್ರಾಮದ ಗುರುರಾಜ್ ಮಂಜಿತ್ತಾಯ ಅವರ ಮನೆಯ ಸಮೀಪದ ಅರಣ್ಯ ಪ್ರದೇಶದಲ್ಲಿ ಬೇಟೆ ನಡೆಸುತ್ತಿದ್ದಾಗ ಅಪರಿಚಿತರಿಂದ ಗುಂಡು ಹಾರಲಾಗಿತ್ತು. ಈ ಗುಂಡು ಗುರುರಾಜ್ ಅವರ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಗಾಜಿಗೆ ತಗುಲಿ, ನಂತರ ಮನೆಯ ಮರದ ಬಾಗಿಲಿಗೆ ಬಡಿದಿತ್ತು. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ಪೊಲೀಸರು ತನಿಖೆ ಆರಂಭಿಸಿದ್ದರು. ಈ ಕಾರ್ಯಾಚರಣೆಯನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರ ಮಾರ್ಗದರ್ಶನದಲ್ಲಿ ನಡೆಸಲಾಗಿದೆ.