
ಉಡುಪಿ : ಗರುಡ ಗ್ಯಾಂಗ್‌ನ ಪ್ರಮುಖ ಮತ್ತು ಕುಖ್ಯಾತ ಅಪರಾಧಿಯಾದ ಕಾರ್ಕಳದ ಕೌಡೂರು ಗ್ರಾಮದ ಕಬೀರ್ ಅಲಿಯಾಸ್ ಕಬೀರ್ ಹುಸೇನ್ (46) ಎಂಬಾತನನ್ನು ‘ಗೂಂಡಾ ಕಾಯ್ದೆ’ (ಕರ್ನಾಟಕ ಆಂಟಿ-ಸೋಶಿಯಲ್ ಆಕ್ಟಿವಿಟೀಸ್ ಪ್ರಿವೆನ್ಷನ್ ಆಕ್ಟ್) ಅಡಿಯಲ್ಲಿ ಬಂಧಿಸಲು ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.
ಕಬೀರ್ ಹುಸೇನ್ 2005 ರಿಂದ ಇಲ್ಲಿಯವರೆಗೆ ಕೊಲೆ, ಕೊಲೆ ಯತ್ನ, ದರೋಡೆ, ಸುಲಿಗೆ, ಕಳ್ಳತನ, ಜಾನುವಾರು ಕಳವು ಮತ್ತು ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಸೇರಿದಂತೆ ಒಟ್ಟು 17 ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಈ 17 ಪ್ರಕರಣಗಳ ಪೈಕಿ, ಆತ ಈಗಾಗಲೇ ಎರಡು ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದು, ಎಂಟು ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದಾನೆ. ಮೂರು ಪ್ರಕರಣಗಳಲ್ಲಿ ರಾಜಿ ಮಾಡಿಕೊಂಡಿದ್ದು, ಎರಡು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ. ಉಳಿದ ಎರಡು ಪ್ರಕರಣಗಳು ಪ್ರಸ್ತುತ ಪೊಲೀಸ್ ತನಿಖೆಯಲ್ಲಿವೆ.
ಈತ ಉಡುಪಿ ಜಿಲ್ಲೆಯ ಕಾರ್ಕಳ ನಗರ, ಹಿರಿಯಡ್ಕ, ಪಡುಬಿದ್ರಿ, ಮಣಿಪಾಲ, ಶಿರ್ವ ಮತ್ತು ಕಾಪು ಪೊಲೀಸ್ ಠಾಣೆಗಳ ವ್ಯಾಪ್ತಿಯ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಉಡುಪಿ ಜಿಲ್ಲೆಯಷ್ಟೇ ಅಲ್ಲದೆ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮತ್ತು ಕೊಪ್ಪ, ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಮತ್ತು ಮಂಗಳೂರು ನಗರ ವ್ಯಾಪ್ತಿಯ ಸುರತ್ಕಲ್ ಠಾಣೆಗಳಲ್ಲಿಯೂ ಈತನ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ಪ್ರಸ್ತುತ, ಗೂಂಡಾ ಕಾಯ್ದೆಯಡಿ ಬಂಧನಕ್ಕೊಳಗಾಗಿರುವ ಕಬೀರ್ ಅಲಿಯಾಸ್ ಕಬೀರ್ ಹುಸೇನ್‌ನನ್ನು ಮೈಸೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಜಿಲ್ಲಾಡಳಿತದ ಈ ಕ್ರಮವು ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.