
ಬೆಂಗಳೂರು: ಪ್ರಸಿದ್ಧ MTR ಫುಡ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಈಸ್ಟರ್ನ್ ಕಾಂಡಿಮೆಂಟ್ಸ್ ಕಂಪನಿಗಳನ್ನು ಖರೀದಿಸಲು ಐಟಿಸಿ (ITC) ಮುಂದಾಗಿದ್ದು, ನಾರ್ವೆ ಮೂಲದ ಓರ್ಕ್ಲಾ ಎಎಸ್ಎ (Orkla ASA) ಜೊತೆ ಮಾತುಕತೆ ಅಂತಿಮ ಹಂತ ತಲುಪಿದೆ.
ಸುಮಾರು 1.4 ಬಿಲಿಯನ್ ಯುಎಸ್ ಡಾಲರ್ (₹12,163 ಕೋಟಿ) ಮೌಲ್ಯದ ಈ ಡೀಲ್ ಮೂಲಕ ಐಟಿಸಿ ದಕ್ಷಿಣದ ಮಾರುಕಟ್ಟೆಯಲ್ಲಿ ತನ್ನ ಪ್ರಭಾವ ಹೆಚ್ಚಿಸಲು ಉದ್ದೇಶಿಸಿದೆ. MTR ಫುಡ್ಸ್ 1950ರಲ್ಲಿ ಬೆಂಗಳೂರಿನ ಮೈಯಾ ಕುಟುಂಬ ಆರಂಭಿಸಿದ ಕಂಪನಿ ಆಗಿದ್ದು, ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿಯೂ ತನ್ನ ಛಾಪು ಮೂಡಿಸಿದೆ.
ಓರ್ಕ್ಲಾ 2007ರಲ್ಲಿ MTR, 2020ರಲ್ಲಿ ಈಸ್ಟರ್ನ್ ಅನ್ನು ಖರೀದಿಸಿದ್ದು, ಇದೀಗ ಉತ್ತಮ ಮೌಲ್ಯಮಾಪನ ದೊರಕಿದರೆ ಖಾಸಗಿ ಒಪ್ಪಂದದ ಮೂಲಕ ಪಾಲು ಮಾರಾಟ ಮಾಡಲು ಸಜ್ಜಾಗಿದೆ. ಇಲ್ಲವಾದರೆ IPO ಆಯ್ಕೆಯನ್ನು ಪರಿಗಣಿಸಬಹುದು.
ಇತ್ತೀಚೆಗೆ FMCG ಬ್ರ್ಯಾಂಡ್ ಪ್ರಸುಮಾ ಸ್ವಾಧೀನ ಪಡೆದಿರುವ ITC, MTR ಮತ್ತು ಈಸ್ಟರ್ನ್ ಅನ್ನು ಪಡೆದುಕೊಂಡರೆ ಮಸಾಲೆ ಹಾಗೂ ತಕ್ಷಣದ ಆಹಾರ ವಿಭಾಗದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಲಿದೆ. FY24ರಲ್ಲಿ ಓರ್ಕ್ಲಾ ಇಂಡಿಯಾ ₹2,400 ಕೋಟಿ ಆದಾಯ ಗಳಿಸಿದ್ದು, ಇದರಲ್ಲಿ 80% MTR ಹಾಗೂ ಈಸ್ಟರ್ನ್ ಬ್ರ್ಯಾಂಡ್‌ನಿಂದ ಬಂದಿದೆ.
ಈ ಡೀಲ್ ಕುರಿತು ಐಟಿಸಿ ಅಧ್ಯಕ್ಷ ಸಂಜೀವ್ ಪುರಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಓರ್ಕ್ಲಾ ಕೂಡ ವದಂತಿಗಳನ್ನು ಖಂಡಿಸಿದೆ. ಒಪ್ಪಂದ ಅಂತಿಮಗೊಂಡರೆ, MTR ಮತ್ತು ಈಸ್ಟರ್ನ್ ಹೊಸ ಮಾಲೀಕನಾಗಿ ಐಟಿಸಿ ಪರಿಣಮಿಸಲಿದೆ.