
ಹಾವೇರಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮವನ್ನು ತರುವುದು ಸರಿಯಲ್ಲ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಕಟುವಾಗಿ ಹೇಳಿದ್ದಾರೆ. ಇದು ಕೇವಲ ನ್ಯಾಯಕ್ಕಾಗಿ ನಡೆಸುವ ಹೋರಾಟವಾಗಿದ್ದು, ದೇವರ ಹೆಸರಿನಲ್ಲಿ ರಾಜಕೀಯ ಮಾಡಬೇಡಿ ಎಂದು ಅವರು ಕರೆ ನೀಡಿದ್ದಾರೆ.
ಶಿಗ್ಗಾವಿ ತಾಲೂಕಿನ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಚಿಕ್ಕವಳಿದ್ದಾಗಿನಿಂದಲೂ ಮಂಜುನಾಥ ಸ್ವಾಮಿಯನ್ನು ಆರಾಧಿಸುತ್ತಿದ್ದೇನೆ. ಧರ್ಮ ಎಂದರೆ ಹಿಂದೂಗಳಿಗೆ ಮಂಜುನಾಥನೇ ಭಗವಂತ. ಆದರೆ, ಈ ಪ್ರಕರಣ ಬೇರೆ, ದೇವರ ನಂಬಿಕೆ ಬೇರೆ,” ಎಂದು ಸ್ಪಷ್ಟಪಡಿಸಿದರು.
“ಭಗವಂತನ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ನಾವು ಕೇವಲ ನ್ಯಾಯವನ್ನು ಕೇಳುತ್ತಿದ್ದೇವೆ. ಒಂದು ವೇಳೆ ತಪ್ಪು ನಡೆದಿರುವುದು ನಿಜವಾದರೆ, ಅದು ಸತ್ಯ ಬಯಲಿಗೆ ಬರುತ್ತದೆ. ತಪ್ಪು ಮಾಡಿಲ್ಲದಿದ್ದರೆ ಅವರಿಗೆ ನ್ಯಾಯ ಸಿಗಲಿದೆ. ಎಲ್ಲರೂ ಎಸ್‌ಐಟಿ ತನಿಖೆಯ ಮೇಲೆ ವಿಶ್ವಾಸ ಇಡಬೇಕು. ಸತ್ಯ ತಿಳಿಯುವವರೆಗೆ ಕಾದು ನೋಡೋಣ,” ಎಂದು ನಾಗಲಕ್ಷ್ಮಿ ಚೌಧರಿ ತಿಳಿಸಿದರು.