
ಅಂತರರಾಷ್ಟ್ರೀಯ ಯೋಗ ದಿನ: ಜೂನ್ 21 ರಂದೇ ಏಕೆ ಆಚರಿಸಲಾಗುತ್ತದೆ?
ಯೋಗದ ಅರ್ಥ: ಯೋಗ ಎಂಬುದು ಪ್ರಾಚೀನ ಭಾರತದಲ್ಲಿ ಹುಟ್ಟಿಕೊಂಡ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಇದು ಕೇವಲ ಶಾರೀರಿಕ ವ್ಯಾಯಾಮವಲ್ಲ, ಬದಲಿಗೆ ಮನಸ್ಸು ಮತ್ತು ದೇಹವನ್ನು ಒಗ್ಗೂಡಿಸಿ, ಆಂತರಿಕ ಶಾಂತಿ ಹಾಗೂ ಜಾಗತಿಕ ಸೌಹಾರ್ದತೆಯನ್ನು ಸಾಧಿಸುವ ಒಂದು ವೈಜ್ಞಾನಿಕ ಮಾರ್ಗವಾಗಿದೆ.
ಜೂನ್ 21 ರಂದೇ ಏಕೆ ಆಚರಿಸಲಾಗುತ್ತದೆ? ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2014 ರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲು ಸೂಚಿಸಿದರು. ಇದಕ್ಕೆ ಪ್ರಮುಖ ಕಾರಣ, ಜೂನ್ 21 ಉತ್ತರ ಗೋಳಾರ್ಧದಲ್ಲಿ ವರ್ಷದ ಅತ್ಯಂತ ದೀರ್ಘವಾದ ದಿನವಾಗಿದೆ (Summer Solstice). ಪ್ರಪಂಚದಾದ್ಯಂತ ವಿಶೇಷ ಪ್ರಾಮುಖ್ಯತೆ ಹೊಂದಿರುವ ಈ ದಿನವು, ಭಾರತೀಯ ಸಂಸ್ಕೃತಿಯ ಪ್ರಕಾರ ದಕ್ಷಿಣಾಯನಕ್ಕೆ ಪರಿವರ್ತನೆಯಾಗುವ ಕಾಲವನ್ನು ಸೂಚಿಸುತ್ತದೆ. ಹಿಂದೂ ಪುರಾಣಗಳ ಪ್ರಕಾರ, ಆದಿಯೋಗಿಯಾದ ಶಿವನು ಯೋಗದ ಜ್ಞಾನವನ್ನು ಮಾನವಕುಲಕ್ಕೆ ಧಾರೆ ಎರೆಯಲು ಪ್ರಾರಂಭಿಸಿದ್ದು ಇದೇ ಅವಧಿಯಲ್ಲ ಎಂದು ನಂಬಲಾಗಿದೆ. ಈ ಕಾರಣಕ್ಕಾಗಿ ಜೂನ್ 21 ರಂದು ವಿಶ್ವದಾದ್ಯಂತ ಯೋಗ ದಿನವನ್ನು ಆಚರಿಸಲಾಗುತ್ತದೆ.
































