
ನವದೆಹಲಿ: ಸ್ವಯಂಘೋಷಿತ ದೇವಮಾನವ ಹಾಗೂ ಶೃಂಗೇರಿ ಮಠದ ಶಿಕ್ಷಣ ಸಂಸ್ಥೆ ಶ್ರೀ ಶಾರದಾ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕನೂ ಆಗಿದ್ದ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ ಗಂಭೀರ ಲೈಂ*ಕ ಕಿರುಕುಳ ಆರೋಪಗಳು ಬಯಲಾಗಿವೆ. ಸ್ವಾಮೀಜಿ ವಿದ್ಯಾರ್ಥಿನಿಯರಿಗೆ ‘ಐ ಲವ್ ಯು… ಬೇಬಿ… ನೀನು ಸುಂದರವಾಗಿ ಕಾಣ್ತಿದ್ದಿ…’ ಎಂದು ವೈಯಕ್ತಿಕ ಸಂದೇಶಗಳನ್ನು ಕಳುಹಿಸುತ್ತಿದ್ದ ವಿಚಾರವು 17 ವಿದ್ಯಾರ್ಥಿನಿಯರು ದಾಖಲಿಸಿದ ದೂರಿನ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಬಡ ವಿದ್ಯಾರ್ಥಿನಿಯರೇ ಗುರಿ
ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ, ಸ್ಕಾಲರ್‌ಶಿಪ್ ಪಡೆಯುವ ವಿದ್ಯಾರ್ಥಿನಿಯರನ್ನೇ ಸ್ವಾಮೀಜಿ ಗುರಿಯಾಗಿಸಿಕೊಂಡು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಆರೋಪಗಳ ಸಾರಾಂಶ:
- ಹಿಡನ್ ಕ್ಯಾಮೆರಾ: ವಿದ್ಯಾರ್ಥಿನಿಯರ ಸುರಕ್ಷತೆ ಹೆಸರಿನಲ್ಲಿ ಹಾಸ್ಟೆಲ್‌ನಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.
- ವೈಯಕ್ತಿಕ ಸಂದೇಶಗಳು: ಸ್ವಾಮೀಜಿ ವಿದ್ಯಾರ್ಥಿನಿಯರನ್ನು ಹೊತ್ತಲ್ಲದ ಹೊತ್ತಲ್ಲಿ ಕರೆಸಿಕೊಳ್ಳುತ್ತಿದ್ದ ಮತ್ತು ‘ಐ ಲವ್ ಯು, ಬೇಬಿ’, ‘ನಿನ್ನನ್ನು ನಾನು ನೆನಪು ಮಾಡಿಕೊಳ್ಳುತ್ತಿದ್ದೇನೆ’, ‘ನೀನು ಹಾಕಿರೋ ಡ್ರೆಸ್ ಚೆನ್ನಾಗಿದೆ’ ಎಂಬಂತಹ ವೈಯಕ್ತಿಕ ಸಂದೇಶಗಳನ್ನು ಕಳುಹಿಸುತ್ತಿದ್ದ.
- ಬೆದರಿಕೆ: ತಮ್ಮ ಸಂದೇಶಗಳಿಗೆ ಪ್ರತಿಕ್ರಿಯೆ ನೀಡದ ಅಥವಾ ತನ್ನ ತೆವಲಿಗೆ ಸಹಕರಿಸದ ವಿದ್ಯಾರ್ಥಿಗಳಿಗೆ ಅಂಕ ಕಡಿತ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ.
- ಪ್ರವಾಸದ ವೇಳೆ ಕಿರುಕುಳ: 2025ರ ಋಷಿಕೇಶ್ ಪ್ರವಾಸದ ವೇಳೆ ಹಲವು ವಿದ್ಯಾರ್ಥಿನಿಯರಿಗೆ ಲೈಂ*ಕ ಕಿರುಕುಳ ನೀಡಲಾಗಿದ್ದು, ವಿರೋಧಿಸಿದವರಿಗೆ ಪರೀಕ್ಷೆಗೆ ಕೂರಲು ಅವಕಾಶ ನೀಡದಿರುವ ಅಥವಾ ಅಂಕಗಳನ್ನು ಕಡಿತಗೊಳಿಸುವ ಬೆದರಿಕೆ ಹಾಕಲಾಗುತ್ತಿತ್ತು.
ಸ್ವಾಮೀಜಿ ವಿರುದ್ಧ 2009 ಮತ್ತು 2016ರಲ್ಲಿಯೂ ಪ್ರಕರಣಗಳು ದಾಖಲಾಗಿದ್ದರೂ, ಅವರು ತಮ್ಮ ಪ್ರಭಾವ ಬಳಸಿ ಅವುಗಳಿಂದ ಪಾರಾಗಿದ್ದರು ಎಂದು ಹೇಳಲಾಗಿದೆ.



































