
ಬೆಂಗಳೂರು: ಹಿರಿಯ ನಟಿ ಸುಹಾಸಿನಿ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಆರೋಗ್ಯ ಸಂಬಂಧಿತ ಅಡೆತಡೆಗಳ ಕುರಿತು ಮಾತನಾಡಿ, ಕ್ಷಯರೋಗ (ಟಿಬಿ) ಸಮಸ್ಯೆ ಎದುರಿಸಿದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ವಿಚಾರ ಬಹಿರಂಗಪಡಿಸುವ ಮೂಲಕ, ಟಿಬಿ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂಬುದನ್ನೂ ಅವರು ಒತ್ತಿಹೇಳಿದ್ದಾರೆ.
“ನನಗೆ ಟಿಬಿ ಸಮಸ್ಯೆ ಇದೆ. ಈ ವಿಷಯ ತಿಳಿದ ಕೂಡಲೇ ಭಯದಿಂದ ಯಾರಿಗೂ ಹೇಳದೆ ಆರು ತಿಂಗಳು ಚಿಕಿತ್ಸೆ ತೆಗೆದುಕೊಂಡೆ. ನನ್ನ ಘನತೆಯನ್ನು ಕಳೆದುಕೊಳ್ಳುವ ಭಯವಿತ್ತು. ಆದರೆ, ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸಲು ಈ ವಿಷಯವನ್ನು ಬಹಿರಂಗಪಡಿಸುತ್ತಿದ್ದೇನೆ” ಎಂದು ಅವರು ತಿಳಿಸಿದ್ದಾರೆ.
ಸುಹಾಸಿನಿಗೆ ಆರು ವರ್ಷದ ವಯಸ್ಸಿನಲ್ಲಿ ಮೊದಲ ಬಾರಿ ಟಿಬಿ ಪತ್ತೆಯಾಯಿತು. ಬಳಿಕ, 36ನೇ ವಯಸ್ಸಿನಲ್ಲಿ ಸಮಸ್ಯೆ ಮತ್ತೆ ಎದುರಾದಾಗ ತೂಕ ಕಡಿಮೆಯಾದರು ಮತ್ತು ಶ್ರವಣ ಸಮಸ್ಯೆಯೂ ಉಂಟಾಯಿತು. ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಂಡುದರಿಂದ, ಅವರು ಆರೋಗ್ಯವನ್ನು ಪುನಃ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
90ರ ದಶಕದಲ್ಲಿ ಪ್ರಮುಖ ನಾಯಕಿಯಾಗಿ ಗುರುತಿಸಿಕೊಂಡಿದ್ದ ಸುಹಾಸಿನಿ, ಇದೀಗ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ತೆಲುಗು ಮಾತ್ರವಲ್ಲ, ದಕ್ಷಿಣ ಭಾರತದ ಹಲವು ಭಾಷೆಗಳ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ.