
ಕಲಬುರಗಿ: ಅಂತರಜಾತಿ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ತಂದೆಯೊಬ್ಬ ತನ್ನ ಸ್ವಂತ ಮಗಳನ್ನೇ ಭೀಕರವಾಗಿ ಕೊಲೆ ಮಾಡಿ, ನಂತರ ಆಕೆಯ ಶವವನ್ನು ಸುಟ್ಟು ಹಾಕಿರುವ ಅಮಾನವೀಯ ಘಟನೆ ಕಲಬುರಗಿ ತಾಲೂಕಿನ ಮೇಳಕುಂದಾ ಗ್ರಾಮದಲ್ಲಿ ನಡೆದಿದೆ. ಈ ಹೇಯ ಕೃತ್ಯಕ್ಕಾಗಿ ತಂದೆ ಶಂಕರ್ ಕೊಳ್ಳೂರ್ನನ್ನು ಪೊಲೀಸರು ಬಂಧಿಸಿದ್ದು, ಆತನಿಗೆ ಸಹಕರಿಸಿದ ಇಬ್ಬರು ಆರೋಪಿಗಳಾದ ಶರಣು ಮತ್ತು ದತ್ತಪ್ಪನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಹತ್ಯೆಗೊಳಗಾದ ಯುವತಿಯನ್ನು ಕವಿತಾ (18) ಎಂದು ಗುರುತಿಸಲಾಗಿದೆ. ಆಕೆ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಅದೇ ಗ್ರಾಮದ ಕುರುಬ ಸಮುದಾಯದ ಯುವಕ ಮಾಳಪ್ಪ ಪೂಜಾರಿಯನ್ನು ಪ್ರೀತಿಸುತ್ತಿದ್ದಳು. ಇವರಿಬ್ಬರ ಪ್ರೀತಿ ಪಿಯುಸಿ ಓದುತ್ತಿದ್ದಾಗಲೇ ಚಿಗುರಿತ್ತು. ಪ್ರೀತಿಯ ವಿಚಾರ ಮನೆಯವರಿಗೆ ತಿಳಿದ ತಕ್ಷಣ, ಆಕೆಯ ಕಾಲೇಜು ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಲಾಗಿತ್ತು. ಆದರೆ, ಕವಿತಾ ತಾನು ಮಾಳಪ್ಪನನ್ನು ಮಾತ್ರವೇ ವಿವಾಹವಾಗುವುದಾಗಿ ಪಟ್ಟು ಹಿಡಿದಿದ್ದಳು. ಈ ಹಠದಿಂದಾಗಿ ಕುಟುಂಬದಲ್ಲಿ ನಿರಂತರವಾಗಿ ಜಗಳಗಳು ನಡೆಯುತ್ತಿದ್ದವು.
ಕವಿತಾಳ ನಿಲುವು ಬದಲಾಗದೆ ಹೋದಾಗ, ಮಧ್ಯರಾತ್ರಿ ತಂದೆ ಶಂಕರ್, ತನ್ನ ಸಹೋದರ ಶರಣು ಜೊತೆ ಸೇರಿಕೊಂಡು ಆಕೆಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ. ನಂತರ, ಕೃಮಿನಾಶಕ ಸೇವಿಸಿ ಮೃತಪಟ್ಟಿದ್ದಾಳೆ ಎಂದು ನಾಟಕವಾಡಿ, ಶವವನ್ನು ಹೊಲದಲ್ಲಿ ಸುಟ್ಟು ಹಾಕಿದ್ದಾರೆ. ಈ ಕುರಿತು ಅನುಮಾನಗೊಂಡ ಪೊಲೀಸರು ತನಿಖೆ ನಡೆಸಿದಾಗ, ಭೀಕರ ಕೊಲೆಯ ರಹಸ್ಯ ಬಯಲಾಗಿದೆ.
ಪೊಲೀಸರ ವಿಚಾರಣೆಯ ವೇಳೆ, ಶಂಕರ್ ತಾನು ಮಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದ್ದು, ಕೊಲೆಗೆ ಸಹಕರಿಸಿದ ಇತರ ಇಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಈ ಘಟನೆಯು ಸಮಾಜದಲ್ಲಿ ಜಾತಿ ಭೇದ ಮತ್ತು ಮರ್ಯಾದಾ ಹತ್ಯೆಗಳಂತಹ ಸಂಪ್ರದಾಯಗಳು ಇಂದಿಗೂ ಜೀವಂತವಾಗಿವೆ ಎಂಬುದಕ್ಕೆ ಒಂದು ನೋವಿನ ಉದಾಹರಣೆಯಾಗಿದೆ.