
ಹುಬ್ಬಳ್ಳಿ: ಮುಖ್ಯಮಂತ್ರಿಯಾಗುವ ಆಸೆಯಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ನೇರವಾಗಿ ಉತ್ತರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, “ನನಗೂ ಮುಖ್ಯಮಂತ್ರಿಯಾಗಬೇಕೆನ್ನುವ ಆಸೆಯಿದೆ. ಯಾಕಾಗಬಾರದು?” ಎಂದು ತಮ್ಮ ಅಭಿಲಾಷೆಯನ್ನು ಬಹಿರಂಗಪಡಿಸಿದರು.
ಅಲ್ಲದೆ, ಸಚಿವ ಸಂಪುಟದ ವಿಷಯಗಳ ಕುರಿತು ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ, ಪುನರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ ಹಾಗೂ ಅವರ ವಿವೇಚನೆಗೆ ಬಿಟ್ಟಿರುವ ವಿಚಾರವಾಗಿದೆ. ಎಲ್ಲ ಶಾಸಕರಿಗೂ ಸಚಿವರಾಗಬೇಕು ಎಂಬ ಆಸೆ ಇರುತ್ತದೆ. ಸೂಕ್ತ ಸಂದರ್ಭದಲ್ಲಿ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ಮೂರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಸೇರಿ ಇತರೆ ವಿಷಯಗಳ ಬಗ್ಗೆ ಮುಖ್ಯಮಂತ್ರಿ ಮತ್ತು ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ ಎಂದು ತಿಳಿಸಿದರು.
ಪೊಲೀಸ್ ಇಲಾಖೆ ನೇಮಕಾತಿ ಕುರಿತು ಮಾಹಿತಿ
ಪೊಲೀಸ್ ಇಲಾಖೆಯ ನೇಮಕಾತಿ ಕುರಿತು ಮಾತನಾಡಿದ ಡಾ. ಪರಮೇಶ್ವರ್, ಇಲಾಖೆಯಲ್ಲಿ ಸುಮಾರು 15 ಸಾವಿರ ಹುದ್ದೆಗಳು ಖಾಲಿ ಇವೆ. ಈಗಾಗಲೇ 4,600 ಕಾನ್‌ಸ್ಟೆಬಲ್‌ಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಇನ್ನು, 545 ಪಿಎಸ್ಐಗಳ ನೇಮಕಾತಿ ಮಾಡಿ ಅವರಿಗೆ ತರಬೇತಿ ನೀಡಲಾಗುತ್ತಿದೆ. ಅದರ ಜೊತೆಗೆ ಹೊಸದಾಗಿ 402 ಪಿಎಸ್ಐ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ. ಅಲ್ಲದೆ, ಇನ್ನೂ 600 ಪಿಎಸ್ಐಗಳ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವರು ಮಾಹಿತಿ ನೀಡಿದರು.
































