
ವಿಶ್ವದ ಸೃಷ್ಟಿಗೆ ಕಾರಣವಾದ ಬಿಗ್ ಬ್ಯಾಂಗ್ ಸಂಭವಿಸಿದ ಕೇವಲ ಎರಡು ಶತಕೋಟಿ ವರ್ಷಗಳ ಅವಧಿಯಲ್ಲೇ ಬ್ರಹ್ಮಾಂಡದಲ್ಲಿದ್ದ ಹಲವು ಬೃಹತ್ ಗೆಲಕ್ಸಿಗಳು ದಿಢೀರನೆ ಅಳಿದುಹೋಗಿದ್ದವು. ನಕ್ಷತ್ರಗಳ ಜನನಕ್ಕೆ ಸದಾ ಸಿದ್ಧವಿರಬೇಕಾಗಿದ್ದ ಈ ಗ್ಯಾಲಕ್ಸಿಗಳು ಅಷ್ಟು ಬೇಗ ಹೇಗೆ ಸತ್ತವು ಎಂಬುದು ದಶಕಗಳಿಂದ ಖಗೋಳಶಾಸ್ತ್ರಜ್ಞರನ್ನು ಕಾಡುತ್ತಿದ್ದ ಬೊಂಬಾಟ್ ರಹಸ್ಯವಾಗಿತ್ತು. ಆದರೆ ಈಗ ಆಧುನಿಕ ತಂತ್ರಜ್ಞಾನದ ನೆರವಿನಿಂದ ವಿಜ್ಞಾನಿಗಳು ಈ ನಿಗೂಢ ಪ್ರಶ್ನೆಗೆ ಕೊನೆಗೂ ಉತ್ತರ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಹ್ಯಾಕಾಶ ಸಂಶೋಧನೆಯಲ್ಲಿ ಮೈಲಿಗಲ್ಲಾಗಿರುವ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ (JWST) ಮತ್ತು ಅಟಕಾಮಾ ಲಾರ್ಜ್ ಮಿಲಿಮೀಟರ್ ಅರೇ (ALMA) ದೂರದರ್ಶಕಗಳನ್ನು ಬಳಸಿಕೊಂಡು ವಿಜ್ಞಾನಿಗಳು ಮಹತ್ತರವಾದ ಶೋಧ ನಡೆಸಿದ್ದಾರೆ. ವಿಶ್ವದ ಆರಂಭಿಕ ಹಂತದಲ್ಲಿದ್ದ ‘CRISTAL-02’ ಎಂಬ ವಿಶಿಷ್ಟ ಗ್ಯಾಲಕ್ಸಿ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅಲ್ಲಿ ಸಂಭವಿಸುತ್ತಿರುವ ಭೀಕರ ವಿದ್ಯಮಾನವೊಂದು ಬೆಳಕಿಗೆ ಬಂದಿದೆ. ಈ ನಕ್ಷತ್ರಪುಂಜದಲ್ಲಿ ಅತಿ ವೇಗವಾಗಿ ಬೀಸುತ್ತಿರುವ ಶಕ್ತಿಯುತ ‘ಗ್ಯಾಲಕ್ಸಿ ವಿಂಡ್’ (ಬಾಹ್ಯಾಕಾಶ ಬಿರುಗಾಳಿ) ಹೊಸ ನಕ್ಷತ್ರಗಳ ರಚನೆಯನ್ನು ಸಂಪೂರ್ಣವಾಗಿ ತಡೆಯುತ್ತಿರುವುದೇ ಇವುಗಳ ವಿನಾಶಕ್ಕೆ ಮುಖ್ಯ ಕಾರಣ ಎಂದು ಸಂಶೋಧಕರು ಧೃಡಪಡಿಸಿದ್ದಾರೆ.
ಸ್ವಿನ್‌ಬರ್ನ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ಖಗೋಳವಿಜ್ಞಾನಿ ರೆಬೆಕ್ಕಾ ಡೇವಿಸ್ ನೇತೃತ್ವದ ತಂಡವು ಈ ಸಂಶೋಧನೆ ನಡೆಸಿದ್ದು, ರಾಯಲ್ ಆಸ್ಟ್ರೋನಾಮಿಕಲ್ ಸೊಸೈಟಿಯ ಮಾಸಿಕ ವರದಿಯಲ್ಲಿ ಇದನ್ನು ಪ್ರಕಟಿಸಲಾಗಿದೆ. ಬಿಗ್ ಬ್ಯಾಂಗ್ ನಡೆದು ಕೇವಲ 1.1 ಶತಕೋಟಿ ವರ್ಷಗಳ ನಂತರದ ಅವಧಿಗೆ ಸೇರಿದ ಈ ಗ್ಯಾಲಕ್ಸಿಯು ತನ್ನಲ್ಲಿರುವ ಇಂಧನವನ್ನೇ ತಾನು ಕಬಳಿಸುತ್ತಿರುವ ಅಪರೂಪದ ದೃಶ್ಯ ಈಗ ಜಗತ್ತಿಗೆ ಪರಿಚಯವಾಗಿದೆ.
ಸಂಶೋಧನೆಯ ಪ್ರಮುಖ ಮುಖ್ಯಾಂಶಗಳು (Key Discoveries):
- ಭೀಕರ ಗ್ಯಾಲಕ್ಸಿ ಬಿರುಗಾಳಿ: ಸಂಶೋಧನೆಯಲ್ಲಿ ಪತ್ತೆಯಾದ ತಂಪಾದ ಅನಿಲದ ಬಿರುಗಾಳಿಯು ಸೆಕೆಂಡಿಗೆ ಬರೋಬ್ಬರಿ 640 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದೆ.
- ದೂರದವರೆಗೂ ಹರಡಿದ ಅನಿಲ: ಈ ಶಕ್ತಿಯುತ ಹೊರಹರಿವು ಬಾಹ್ಯಾಕಾಶದಲ್ಲಿ ಸುಮಾರು 7 ಕಿಲೋಪಾರ್ಸೆಕ್‌ಗಳಷ್ಟು ವಿಸ್ತಾರವಾಗಿ ಹರಡಿಕೊಂಡಿದೆ.
- ಇಂಧನ ಖಾಲಿ ಮಾಡುವ ಪ್ರಕ್ರಿಯೆ: ನಕ್ಷತ್ರಗಳು ಸೃಷ್ಟಿಯಾಗುವ ವೇಗಕ್ಕಿಂತ ಎರಡು ಪಟ್ಟು ಹೆಚ್ಚು ವೇಗದಲ್ಲಿ ಈ ಅನಿಲವು ಗ್ಯಾಲಕ್ಸಿಯಿಂದ ಹೊರಬೀಳುತ್ತಿದೆ.
- ಅಲ್ಪಾವಧಿಯ ಜೀವಿತಾವಧಿ: ಈ ಭೀಕರ ವೇಗ ಹೀಗೆಯೇ ಮುಂದುವರಿದರೆ, ಮುಂದಿನ ಕೇವಲ 100 ಮಿಲಿಯನ್ ವರ್ಷಗಳಲ್ಲಿ ಈ ನಕ್ಷತ್ರಪುಂಜದಲ್ಲಿರುವ ಸಂಪೂರ್ಣ ಆಣ್ವಿಕ ಇಂಧನ ಖಾಲಿಯಾಗಲಿದೆ.
ಗೆಲಕ್ಸಿಗಳ ವಿನಾಶದ ಹಿಂದಿನ ಅಸಲಿ ಶಕ್ತಿ ಯಾವುದು?
ಸಾಮಾನ್ಯವಾಗಿ ಗ್ಯಾಲಕ್ಸಿಗಳ ನಾಶಕ್ಕೆ ಅಲ್ಲಿರುವ ದೈತ್ಯ ಕಪ್ಪು ಕುಳಿಗಳು (Black Holes) ಕಾರಣ ಎಂದು ಭಾವಿಸಲಾಗುತ್ತದೆ. ಆದರೆ ಈ ಸಂಶೋಧನೆಯು ಸಂಪೂರ್ಣ ವಿಭಿನ್ನವಾದ ಸತ್ಯವನ್ನು ಹೊರಹಾಕಿದೆ. ಇಲ್ಲಿ ಕಪ್ಪು ಕುಳಿಗಳ ಬದಲಾಗಿ ‘ಸೂಪರ್ನೋವಾ’ (Supernovae) ಮಹಾಸ್ಫೋಟಗಳು ಈ ದುರಂತಕ್ಕೆ ಕಾರಣವಾಗಿವೆ. ಎರಡು ದೊಡ್ಡ ಗೆಲಕ್ಸಿಗಳು ಪರಸ್ಪರ ಡಿಕ್ಕಿ ಹೊಡೆದಾಗ (Galaxy Collision) ಅಲ್ಲಿ ಅತ್ಯಂತ ವೇಗವಾಗಿ ಹೊಸ ನಕ್ಷತ್ರಗಳು ಸೃಷ್ಟಿಯಾಗುತ್ತವೆ. ಸಾಮಾನ್ಯಕ್ಕಿಂತ ಮೂರು ಪಟ್ಟು ಹೆಚ್ಚು ವೇಗದಲ್ಲಿ ನಕ್ಷತ್ರಗಳು ಹುಟ್ಟಿದಾಗ, ಅಲ್ಲಿನ ದೈತ್ಯ ನಕ್ಷತ್ರಗಳು ಅಷ್ಟೇ ವೇಗವಾಗಿ ಸ್ಫೋಟಗೊಂಡು ಸೂಪರ್ನೋವಾಗಳಾಗಿ ಬದಲಾಗುತ್ತವೆ.
ಈ ಸರಣಿ ಸೂಪರ್ನೋವಾ ಸ್ಫೋಟಗಳಿಂದ ಬಿಡುಗಡೆಯಾಗುವ ಅಗಾಧವಾದ ಶಕ್ತಿಯು ಗ್ಯಾಲಕ್ಸಿಯಲ್ಲಿ ತಲ್ಲಣ ಸೃಷ್ಟಿಸುತ್ತದೆ. ಈ ಶಕ್ತಿಯೇ ಭೀಕರ ಬಿರುಗಾಳಿಯಾಗಿ ಮಾರ್ಪಟ್ಟು, ಹೊಸ ನಕ್ಷತ್ರಗಳ ರಚನೆಗೆ ಬೇಕಾಗುವ ಮುಖ್ಯ ಇಂಧನವಾದ ತಂಪಾದ ಅನಿಲವನ್ನು (Cold Gas) ನಕ್ಷತ್ರಪುಂಜದಿಂದ ಸಂಪೂರ್ಣವಾಗಿ ಹೊರದೂಡುತ್ತದೆ. ಆರಂಭಿಕ ಬ್ರಹ್ಮಾಂಡದಲ್ಲಿದ್ದ ಸುಮಾರು ಶೇ. 50 ರಷ್ಟು ಬೃಹತ್ ಗೆಲಕ್ಸಿಗಳು ಇಂತಹದೇ ಘರ್ಷಣೆ ಮತ್ತು ವಿಲೀನ ಪ್ರಕ್ರಿಯೆಗೆ ಒಳಗಾಗಿದ್ದವು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಈ ಪ್ರಕ್ರಿಯೆಯಿಂದಾಗಿ ವಿಶ್ವದ ಆರಂಭಿಕ ದಿನಗಳಲ್ಲೇ ಹಲವು ದೈತ್ಯ ಗ್ಯಾಲಕ್ಸಿಗಳು ಜೀವಕಳೆದುಕೊಂಡು ‘ಸತ್ತ ಗೆಲಕ್ಸಿಗಳಾಗಿ’ ಮಾರ್ಪಟ್ಟಿವೆ ಎಂಬುದು ಈಗ ಸ್ಪಷ್ಟವಾಗಿದೆ.
































