
ಹೊಸದಿಲ್ಲಿ: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿ ರಾಷ್ಟ್ರಪತಿ ಭವನದಲ್ಲಿ ಮದುವೆ ಸಮಾರಂಭ ನಡೆಯಲಿದೆ. ಫೆಬ್ರವರಿ 12 ರಂದು ನಡೆಯಲಿರುವ ಈ ವಿವಾಹಕ್ಕೆ ರಾಷ್ಟ್ರಪತಿ ದೌಪದಿ ಮುರ್ಮು ಅನುಮೋದನೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರಾಷ್ಟ್ರಪತಿಗಳ ವೈಯಕ್ತಿಕ ಭದ್ರತಾ ಅಧಿಕಾರಿ (PSO) ಮತ್ತು CRPF ಅಸಿಸ್ಟೆಂಟ್ ಕಮಾಂಡೆಂಟ್ ಪೂನಂ ಗುಪ್ತಾ ಅವರು CRPF ಅಧಿಕಾರಿ ಅವನೀಶ್ ಕುಮಾರ್ ಅವರನ್ನು ವರಿಸಲಿದ್ದಾರೆ. ಈ ವಿವಾಹ ಸಮಾರಂಭ ರಾಷ್ಟ್ರಪತಿ ಭವನದ ಮದರ್ ಥೆರೇಸಾ ಬ್ರೌನ್ ಕಾಂಪ್ಲೆಕ್ಸ್‌ನಲ್ಲಿ ಜರುಗಲಿದೆ. ಅವನೀಶ್ ಕುಮಾರ್ ಪ್ರಸ್ತುತ ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪೂನಂ ಗುಪ್ತಾ ಯಾರು?
ಗಣಿತದಲ್ಲಿ ಪದವಿ ಪಡೆದ ಪೂನಂ ಗುಪ್ತಾ ಅವರು ಗ್ವಾಲಿಯರ್‌ನ ಜೀವಾಜಿ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ 8ನೇ ಶ್ರೇಣಿ ಗಳಿಸಿರುವ ಅವರು, ಭದ್ರತಾ ಅಧಿಕಾರಿಯಾಗುವ ಮೊದಲು ಬಿಹಾರದ ನಕ್ಸಲ್ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದರು.
ರಾಷ್ಟ್ರಪತಿ ಭವನದಲ್ಲೇ ಮದುವೆ ಯಾಕೆ?
ಪೂನಂ ಗುಪ್ತಾ ಅವರ ಪ್ರಾಮಾಣಿಕ ಸೇವೆ ಮತ್ತು ನಿಷ್ಠೆ ರಾಷ್ಟ್ರಪತಿ ದೌಪದಿ ಮುರ್ಮು ಅವರನ್ನು ಪ್ರಭಾವಿತಗೊಳಿಸಿದ್ದು, ಅವರ ವಿವಾಹವನ್ನು ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲು ಅವಕಾಶ ನೀಡಲಾಗಿದೆ. ಆದರೆ ಈ ಬಗ್ಗೆ ರಾಷ್ಟ್ರಪತಿ ಭವನದಿಂದ ಯಾವುದೇ ಅಧಿಕೃತ ಹೇಳಿಕೆ ಬರದೇ ಇರುವುದು ಗಮನಾರ್ಹ.