
ಅರಕಲಗೂಡು (ಹಾಸನ): ಜನಸಾಮಾನ್ಯರ ಬದುಕು ಮುಖ್ಯ, ಅಧಿಕಾರವಲ್ಲ “ನನಗೆ ಮುಖ್ಯಮಂತ್ರಿ ಆಗುವುದು ಮುಖ್ಯವಲ್ಲ, ಬದಲಾಗಿ ರಾಜ್ಯದ ಜನರ ಬದುಕನ್ನು ಹಸನು ಮಾಡುವುದು ಮುಖ್ಯ. ಪ್ರಸ್ತುತ ಕರ್ನಾಟಕದಲ್ಲಿರುವ ಆಡಳಿತ ವಿರೋಧಿ ಮತ್ತು ಜನವಿರೋಧಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದೇ ನನ್ನ ಮುಂದಿರುವ ಏಕೈಕ ಗುರಿ” ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಅರಕಲಗೂಡಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗುಡುಗಿದರು.
ಗ್ಯಾರಂಟಿ ಯೋಜನೆಗಳ ಅಸಲಿ ಬಣ್ಣ ಬಯಲು: ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸುಭಿಕ್ಷವಾಗಿದೆ ಎಂದು ಬೆನ್ನು ತಟ್ಟಿಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಕುಮಾರಸ್ವಾಮಿ ಅವರು ನೇರ ಪ್ರಶ್ನೆ ಹಾಕಿದ್ದಾರೆ. “ಈ ಹಿಂದೆ ಹಿರಿಯ ನಾಯಕರಾದ ಆರ್.ವಿ. ದೇಶಪಾಂಡೆ ಮತ್ತು ಬಸವರಾಜ ರಾಯರಡ್ಡಿ ಅವರು ಗ್ಯಾರಂಟಿಗಳಿಂದ ಆಗುತ್ತಿರುವ ಆರ್ಥಿಕ ಹೊರೆಯ ಬಗ್ಗೆ ಮಾತನಾಡಿದ್ದರು. ಈಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಅದೇ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಬೊಕ್ಕಸಕ್ಕೆ ಹೊರೆಯಾಗುತ್ತಿವೆ ಎಂಬ ಸತ್ಯ ಈಗಲಾದರೂ ಅವರಿಗೆ ಅರ್ಥವಾಯಿತೇ?” ಎಂದು ವ್ಯಂಗ್ಯವಾಡಿದರು.
ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರದ ವಿಫಲತೆ: ರಾಜ್ಯದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಧಾರವಾಡದಲ್ಲಿ ಯುವಕರು ನಡೆಸಿದ ಬೃಹತ್ ಪ್ರತಿಭಟನೆಯನ್ನು ಉಲ್ಲೇಖಿಸಿದರು. “ಸಿದ್ದರಾಮಯ್ಯ ಅವರು ಮೊದಲ ಬಾರಿ ಅಧಿಕಾರಕ್ಕೆ ಬಂದಾಗ 2.5 ಲಕ್ಷ ಹುದ್ದೆಗಳು ಖಾಲಿ ಇವೆ ಎಂದಿದ್ದರು. ಆದರೆ ಇಂದಿಗೂ ಆ ಸಂಖ್ಯೆ ಹಾಗೆಯೇ ಇದೆ. ಶಿಕ್ಷಣ, ಆರೋಗ್ಯ ಮತ್ತು ಕೃಷಿಯಂತಹ ಪ್ರಮುಖ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯಿದ್ದರೂ ಸರ್ಕಾರ ನೇಮಕಾತಿಗೆ ಆಸಕ್ತಿ ತೋರುತ್ತಿಲ್ಲ. ಒಳಮೀಸಲಾತಿಯ ನೆಪವೊಡ್ಡಿ ಯುವಕರ ಭವಿಷ್ಯದ ಜೊತೆ ಸರ್ಕಾರ ಆಟವಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಸಿದ ಆರೋಗ್ಯ ವ್ಯವಸ್ಥೆ: ಸರ್ಕಾರಿ ಆಸ್ಪತ್ರೆಗಳ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಆಸ್ಪತ್ರೆಗಳಲ್ಲಿ ತುರ್ತು ಔಷಧಿಗಳ ಕೊರತೆಯಿದೆ. ಕೆಲವೆಡೆ ಅವಧಿ ಮುಗಿದ (Expired) ಔಷಧಿಗಳನ್ನು ನೀಡಲಾಗುತ್ತಿದೆ. ಗ್ಯಾರಂಟಿಗಳಿಗೆ ಖರ್ಚು ಮಾಡುವ ಹಣವನ್ನು ಮೂಲಭೂತ ಸೌಕರ್ಯಗಳಿಗೆ ಬಳಸಿದ್ದರೆ ಇಂದು ಶಾಲೆ ಮತ್ತು ಆಸ್ಪತ್ರೆಗಳ ಪರಿಸ್ಥಿತಿ ಉತ್ತಮವಾಗಿರುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಸ್ಥಳೀಯ ಸಂಸ್ಥೆ ಚುನಾವಣೆ ಮತ್ತು ಮೈತ್ರಿ: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬಗ್ಗೆ ಮಾತನಾಡಿದ ಅವರು, “ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕುರಿತು ಇನ್ನು ಯಾವುದೇ ಅಧಿಕೃತ ಮಾತುಕತೆ ನಡೆದಿಲ್ಲ. ನ್ಯಾಯಾಲಯದ ಆದೇಶದಂತೆ ಮೇ ತಿಂಗಳಿನಲ್ಲಿ ಚುನಾವಣೆ ನಡೆಯಲೇಬೇಕು. ಎರಡು ಪಕ್ಷಗಳ ಹಿರಿಯ ನಾಯಕರು ಕುಳಿತು ಚರ್ಚಿಸಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದರು.



































