ಉಡುಪಿ : ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ, ಉಡುಪಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕೇಂದ್ರ ಸಮಿತಿ, ಧರ್ಮಸ್ಥಳ ಇವರ ಸಹಯೋಗದೊಂದಿಗೆ ಗುರುಪೂರ್ಣಿಮಾ ಪ್ರಯುಕ್ತ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿವರ್ಯರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರಿಗೆ ಭವ್ಯ ಗುರುವಂದನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ, ವೇದಿಕೆಯಲ್ಲಿ ವಿಶೇಷ ಆಸನವನ್ನು ಸಿದ್ಧಪಡಿಸಿ, ಅದರ ಮೇಲೆ ಶ್ರೀಪಾದದ್ವಯರನ್ನು ಕುಳ್ಳಿರಿಸಿ, ಪೇಟ ತೊಡಿಸಿ, ಪುಷ್ಪಾರ್ಚನೆಯೊಂದಿಗೆ ಗೌರವಪೂರ್ವಕವಾಗಿ ವಂದಿಸಲಾಯಿತು. ಭಕ್ತರು ಶ್ರೀಪಾದದ್ವಯರಿಂದ ಆಶೀರ್ವಾದವನ್ನು ಪಡೆದರು.
ಕಾರ್ಯಕ್ರಮದ ಭಾಗವಾಗಿ, ವಿದುಷಿ ಪರಿಮಳ ಅವರಿಂದ ಭಜನಾ ಕಮ್ಮಟವನ್ನು ಆಯೋಜಿಸಲಾಗಿತ್ತು. ನಂತರ, ವಿದುಷಿ ಉಷಾ ಹೆಬ್ಬಾರ್ ಅವರ ನೇತೃತ್ವದಲ್ಲಿ ಭಜನಾನೃತ್ಯ ಕಾರ್ಯಕ್ರಮ ಹಾಗೂ ನೃತ್ಯ ವೈವಿಧ್ಯ ಕಾರ್ಯಕ್ರಮಗಳು ನೆರೆದವರ ಗಮನ ಸೆಳೆದವು. ಭಕ್ತಿಪೂರ್ವಕ ಭಜನೆಗಳು ಮತ್ತು ನೃತ್ಯ ಪ್ರದರ್ಶನಗಳು ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದವು.
ಅಂತಿಮವಾಗಿ, ಶ್ರೀಪಾದರು ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು, ಆಧ್ಯಾತ್ಮಿಕ ಚಿಂತನೆಗಳು ಮತ್ತು ಗುರುಗಳ ಮಹತ್ವದ ಕುರಿತು ಭೋಧನೆಗಳನ್ನು ನೀಡಿದರು. ಈ ಕಾರ್ಯಕ್ರಮವು ಗುರುಭಕ್ತಿ ಮತ್ತು ಸಂಸ್ಕೃತಿಯ ಸಮ್ಮಿಲನಕ್ಕೆ ಸಾಕ್ಷಿಯಾಯಿತು.