
ಬೆಂಗಳೂರು : ರಾಜ್ಯದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಟಿಕೆಟ್ ದರಗಳನ್ನು ದುಬಾರಿಯಾಗಿ ನಿಗದಿ ಮಾಡಿ ಜನರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದಾದ್ಯಂತ ಏಕರೂಪದ ಟಿಕೆಟ್ ದರ ಜಾರಿಗೊಳಿಸುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಜೆಡಿಎಸ್ ಸದಸ್ಯ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಚಿತ್ರಮಂದಿರಗಳ ಮಾಲೀಕರು ತಮ್ಮ ಇಚ್ಛೆಯಂತೆ ದರ ನಿಗದಿ ಮಾಡುತ್ತಿದ್ದಾರೆ. ಆದರೆ ಸರ್ಕಾರದಿಗೂ ಇದನ್ನು ನಿಯಂತ್ರಿಸುವ ಅಧಿಕಾರವಿದ್ದು, ಅಗತ್ಯವಿದ್ದರೆ ಅದನ್ನು ಬಳಸಲಾಗುವುದು ಎಂದರು.

2018ರ ಮೇ 11ರಂದು ಸರಕಾರವು ಟಿಕೆಟ್ ದರ ನಿಯಂತ್ರಣಕ್ಕೆ ಆದೇಶ ಹೊರಡಿಸಿದ್ದರೂ, ಅದಕ್ಕೆ ತಡೆಯಾಜ್ಞೆ ಬಂದ ಕಾರಣ ಅದನ್ನು ವಾಪಸು ಪಡೆಯಲಾಯಿತು. ಆದರೂ, ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ ಹಾಗೂ ಆಹಾರ, ನೀರಿನ ಮೇಲಿನ ಅತಿಯಾದ ದರಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.