
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಕುರ್ಚಿ ಕದನ ವಿಚಾರದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಪ್ರಸ್ತುತ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿಗರ ವಲಯದಲ್ಲಿ ಗುರುತಿಸಿಕೊಂಡಿದ್ದರೂ, ಕಾಂಗ್ರೆಸ್ ಹೈಕಮಾಂಡ್ ನಾಯಕತ್ವ ಬದಲಾವಣೆಗೆ ನಿರ್ಧರಿಸಿದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಸಂಪೂರ್ಣವಾಗಿ ಒಪ್ಪಿಕೊಳ್ಳುವುದಾಗಿ ಅವರು ಗುರುವಾರ (ನ. 27) ಹೇಳಿದ್ದಾರೆ.
“ಮುಖ್ಯಮಂತ್ರಿ ಆಕಾಂಕ್ಷೆಗಳ ಬಗ್ಗೆ ಯಾರಾದರೂ ನನ್ನನ್ನು ಕೇಳಿದಾಗ, ನಾನು ಸ್ವಾಭಾವಿಕವಾಗಿಯೇ ಮುಖ್ಯಮಂತ್ರಿ ರೇಸ್‌ನಲ್ಲಿದ್ದೇನೆ ಎಂದು ಉತ್ತರಿಸುತ್ತೇನೆ. ಆದರೆ ಅಧಿಕಾರ ಪರಿವರ್ತನೆಯಾಗಿ ಡಿಕೆಶಿ ಮುಖ್ಯಮಂತ್ರಿಯಾದರೆ, ನಾವು ಅದನ್ನು ಸ್ವೀಕರಿಸುತ್ತೇವೆ,” ಎಂದು ಪರಮೇಶ್ವರ್ ಅವರು ಇಂಡಿಯಾ ಟುಡೇಗೆ ತಿಳಿಸಿದರು. ಪಕ್ಷವು ಅನುಮೋದಿಸಿದರೆ ಯಾವುದೇ ಪರಿವರ್ತನೆ ಸುಗಮವಾಗಿರುತ್ತದೆ ಎಂದು ಅವರು ಹೇಳಿದರು.
ತಾನೂ ಆಕಾಂಕ್ಷಿ, ಖರ್ಗೆಯೂ ಸೂಕ್ತ ಅಭ್ಯರ್ಥಿ
ಡಾ. ಜಿ. ಪರಮೇಶ್ವರ್ ಅವರು ತಾವೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಪುನರುಚ್ಚರಿಸಿದರು. ಪಕ್ಷಕ್ಕೆ ತನ್ನ ಕೊಡುಗೆಯ ಬಗ್ಗೆ ಹೈಕಮಾಂಡ್‌ಗೆ ಅರಿವಿದೆ, ಆದರೆ ಅಂತಿಮ ನಿರ್ಧಾರ ಹೈಕಮಾಂಡ್ ಮಾಡಲಿದೆ ಎಂದರು. ಜೊತೆಗೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಸಹ “ಮುಖ್ಯಮಂತ್ರಿ ಹುದ್ದೆಗೆ ಸೂಕ್ತ ಅಭ್ಯರ್ಥಿ” ಎಂದು ಪರಮೇಶ್ವರ್ ಹೇಳಿದರು. ಆದರೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಸ್ತಾಂತರದ ಯಾವುದೇ ಒಪ್ಪಂದದ ಬಗ್ಗೆ ತಮಗೆ ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಾರಕಿಹೊಳಿ ಭೇಟಿಯಾದ ಡಿಕೆಶಿ
ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ಮತ್ತೊಂದು ಬೆಳವಣಿಗೆಯಲ್ಲಿ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅತ್ಯಾಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವ ಸತೀಶ ಜಾರಕಿಹೊಳಿ ಅವರನ್ನು ಮಂಗಳವಾರ ತಡರಾತ್ರಿ ದಿಢೀರ್ ಭೇಟಿಯಾಗಿದ್ದಾರೆ. ಇದು ಸಿದ್ದರಾಮಯ್ಯ ಬಣದ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯದಲ್ಲಿ ಡಿ.ಕೆ. ಶಿವಕುಮಾರ್ ಮುಂದಡಿ ಇಟ್ಟಂತಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.



































