
ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಯುವಕನೊಬ್ಬ ಕಾಂಡೈ ಮೀನೊಂದು ಹಾರಿ ಬಂದು ಹೊಟ್ಟೆಗೆ ಚುಚ್ಚಿದ ಪರಿಣಾಮ ಮೃತಪಟ್ಟಿರುವ ದಾರುಣ ಘಟನೆ ಕಾರವಾರ ತಾಲೂಕಿನ ಮಾಜಾಳಿ ಗ್ರಾಮದಲ್ಲಿ ನಡೆದಿದೆ. ಘಟನೆಯ ನಂತರ ಚಿಕಿತ್ಸೆ ನೀಡಿದ ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ಮೃತರ ಕುಟುಂಬಸ್ಥರು ಮತ್ತು ಸ್ಥಳೀಯ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತ ಯುವಕನನ್ನು ಮಾಜಾಳಿ ಗ್ರಾಮದ ದಾಂಡೇಭಾಗ ನಿವಾಸಿ ಅಕ್ಷಯ ಅನಿಲ ಮಾಜಾಳಿಕರ್ (24) ಎಂದು ಗುರುತಿಸಲಾಗಿದೆ.
ಮೀನಿನ ಚುಚ್ಚುವಿಕೆಯಿಂದ ದುರಂತ
ಅಕ್ಷಯ ಮಂಗಳವಾರ (ಅ. 14) ಎಂದಿನಂತೆ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ನೀರಿನಿಂದ ಸುಮಾರು 8 ರಿಂದ 10 ಇಂಚು ಉದ್ದದ ಕಾಂಡೈ ಮೀನೊಂದು (Kandai Fish) ಅನಿರೀಕ್ಷಿತವಾಗಿ ದೋಣಿಯೊಳಗೆ ಹಾರಿ ಬಂದಿದೆ. ಈ ಮೀನು ನೇರವಾಗಿ ಅಕ್ಷಯನ ಹೊಟ್ಟೆಗೆ ಚುಚ್ಚಿದ ಪರಿಣಾಮ ಆತನಿಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಗಾಯಗೊಂಡ ಅಕ್ಷಯನನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೈದ್ಯರ ನಿರ್ಲಕ್ಷ್ಯದ ಆರೋಪ
ಆಸ್ಪತ್ರೆಯಲ್ಲಿ ಗಾಯದ ಭಾಗಕ್ಕೆ ಹೊಲಿಗೆ ಹಾಕಿ, ವೈದ್ಯರು ಅಕ್ಷಯನನ್ನು ಡಿಸ್ಚಾರ್ಜ್ ಮಾಡಿದ್ದರು. ಆದರೆ, ನೋವು ಕಡಿಮೆಯಾಗದ ಕಾರಣ ಬುಧವಾರ (ಅ. 15) ಅಕ್ಷಯ ಮರಳಿ ಆಸ್ಪತ್ರೆಗೆ ದಾಖಲಾಗಿದ್ದನು. ಆದರೆ, ಗುರುವಾರ (ಅ. 16) ಬೆಳಗಿನ ಜಾವ ಸುಮಾರು 5 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲೇ ಅಕ್ಷಯ ಕೊನೆಯುಸಿರೆಳೆದನು. ಮೀನಿನ ಮೂತಿಯಿಂದ ಚುಚ್ಚಿದ ಪರಿಣಾಮ ಅಕ್ಷಯನ ಕರುಳಿಗೆ ಗಂಭೀರ ಗಾಯವಾಗಿರುವುದೇ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ.
“ವೈದ್ಯರ ನಿರ್ಲಕ್ಷ್ಯದಿಂದಲೇ ಅಕ್ಷಯ ಸಾವನ್ನಪ್ಪಿದ್ದಾನೆ. ಕೇವಲ ಹೊಲಿಗೆ ಹಾಕಿ ಡಿಸ್ಚಾರ್ಜ್ ಮಾಡಿದ್ದರು. ಸಿಟಿ ಸ್ಕ್ಯಾನ್ ಮಾಡಿ ಮೀನಿನ ಮುಳ್ಳು ಕರುಳಿಗೆ ತಾಗಿದೆ ಎನ್ನುವುದನ್ನು ಪತ್ತೆ ಹಚ್ಚಿದ್ದರೆ ನನ್ನ ಮಗ ಬದುಕುತ್ತಿದ್ದ,” ಎಂದು ಮೃತ ಯುವಕನ ತಂದೆ ಅನಿಲ್ ಮಾಜಾಳಿಕರ್ ಅವರು ಆರೋಪಿಸಿದ್ದಾರೆ. ಸರಿಯಾದ ಚಿಕಿತ್ಸೆ ನೀಡದಿರುವುದಕ್ಕೆ ವೈದ್ಯರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ನೂರಾರು ಮೀನುಗಾರರು ಮತ್ತು ಕುಟುಂಬ ಸದಸ್ಯರು ಕ್ರಿಮ್ಸ್ ಆಸ್ಪತ್ರೆ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ವೈದ್ಯರು ಈ ಆರೋಪಗಳಿಗೆ ಪ್ರತಿಕ್ರಿಯಿಸಿ, “ಇದು ವಿಶ್ವದಲ್ಲಿಯೇ ವರದಿಯಾಗಿರುವ ಇಂತಹ ನಾಲ್ಕನೇ ಪ್ರಕರಣವಾಗಿದೆ. ತಮ್ಮ ಕಡೆಯಿಂದ ಯಾವುದೇ ನಿರ್ಲಕ್ಷ್ಯವಾಗಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.