
ಲಿಂಗಸುಗೂರು: ‘ಮರ್ಯಾದೆ’ ಹೆಸರಿನಲ್ಲಿ ಅಪ್ರಾಪ್ತ ಮಗಳನ್ನು ಹತ್ಯೆಗೈದು ಕೃಷ್ಣಾ ನದಿಗೆ ಎಸೆದ ಹೃದಯ ವಿದ್ರಾವಕ ಘಟನೆ ಏಳು ತಿಂಗಳ ನಂತರ ಬೆಳಕಿಗೆ ಬಂದಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಂಚಿನಾಳ ಗ್ರಾಮದ ಲಕ್ಕಪ್ಪ ಕಂಬಳಿ ಎಂಬುವವರ ಈ ಕೃತ್ಯವು ಇದೀಗ ಬೆಳಕಿಗೆ ಬಂದಿದೆ.
ಅಪ್ರಾಪ್ತ ಮಗಳು ರೇಣುಕಾ (17) ತನ್ನ ಗ್ರಾಮದ ಹನುಮಂತ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಈ ಸಂಬಂಧ ತಡೆದು ನಿಲ್ಲಿಸಲು ವಿಫಲವಾದ ಲಕ್ಕಪ್ಪ, ಆಕ್ರೋಶದಿಂದ ದಾಳಿಂಬೆ ತೋಟದಲ್ಲಿ ಮಗಳನ್ನು ಬಲವಾಗಿ ಹೊಡೆದು ಹತ್ಯೆಗೈದು, ನಂತರ ಶವವನ್ನು ಬೈಕ್‌ನಲ್ಲಿ ತಂದು ಕೃಷ್ಣಾ ನದಿಗೆ ಎಸೆದಿದ್ದಾನೆ.
ಪೋಕ್ಸೋ ಪ್ರಕರಣ ವಿಚಾರಣೆಯ ವೇಳೆ ನ್ಯಾಯಾಧೀಶರು ರೇಣುಕಾ ಹಾಜರಾತಿಯನ್ನು ಕೇಳಿದಾಗ, ಪ್ರಕರಣ ಮರು ಬೆಳಕಿಗೆ ಬಂದಿದೆ. ತನಿಖೆಯ ನಂತರ ಲಕ್ಕಪ್ಪನನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.