
ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ (ಅಲುಮ್ನಿ ಅಸೋಸಿಯೇಷನ್) ವನ್ನು ಕಡ್ಡಾಯವಾಗಿ ರಚಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಹಳೆ ವಿದ್ಯಾರ್ಥಿಗಳ ಸಹಭಾಗಿತ್ವವನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಈ ಕುರಿತು ಸಲಹೆ ನೀಡಿದ ಡಿ.ಕೆ. ಶಿವಕುಮಾರ್, ಹಳೆ ವಿದ್ಯಾರ್ಥಿ ಸಂಘಗಳಿಂದ ಸರ್ಕಾರಿ ಶಾಲೆಗಳಿಗೆ ಶಕ್ತಿ ತುಂಬುವ ಕೆಲಸವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಉಪಕ್ರಮಕ್ಕೆ ಅಗತ್ಯ ಮಾರ್ಗದರ್ಶನ ನೀಡುವ ಭರವಸೆಯನ್ನು ಡಿಸಿಎಂ ನೀಡಿದ್ದಾರೆ.
“ಸರ್ಕಾರಿ ಶಾಲೆಯಲ್ಲಿ ಓದಿ ಸಮಾಜದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದಿರುವವರು ತಾವು ಓದಿದ ಶಾಲೆಗಳ ಕಲ್ಯಾಣಕ್ಕಾಗಿ ಅಗತ್ಯ ನೆರವು ನೀಡುತ್ತಾರೆ. ಇದಕ್ಕೆ ಸೂಕ್ತ ಸಂಘಟನೆ ಬೇಕು. ವೆಂಕಟಪ್ಪನವರು ಮಾಡಿರುವಂತಹ ಸಾಹಸಕ್ಕೆ ಇನ್ನಷ್ಟು ಜನರು ಕೈಜೋಡಿಸಬೇಕು. ಇಂತಹ ಕೆಲಸಗಳು ಸಮಾಜದಲ್ಲಿ ಅವರ ಹೆಸರುಗಳನ್ನು ಶಾಶ್ವತವಾಗಿ ಉಳಿಸುತ್ತವೆ” ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳ ಕೊಡುಗೆಯನ್ನು ಬಳಸಿಕೊಳ್ಳುವುದು ಈ ಆದೇಶದ ಪ್ರಮುಖ ಉದ್ದೇಶವಾಗಿದೆ.