
ಚಿಕ್ಕಮಗಳೂರು: ಶೃಂಗೇರಿಯಲ್ಲಿ ಗಲಾಟೆ ನಡೆದಿದೆ, ನನಗೆ ತುಂಬಾ ಪೆಟ್ಟಾಗಿದೆ ಎಂದು 108 ಆ್ಯಂಬುಲೆನ್ಸ್‌ಗೆ ಕರೆ ಮಾಡಿದ ಕುಡುಕನೊಬ್ಬ ಗೊಂದಲ ಸೃಷ್ಟಿಸಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಬಾಳೆಹೊನ್ನೂರಿನ 108 ಆ್ಯಂಬುಲೆನ್ಸ್‌ಗೆ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಶೃಂಗೇರಿಯಿಂದ ಕರೆ ಮಾಡಿ “ನನಗೆ ಭಾರಿ ಪೆಟ್ಟಾಗಿದೆ, ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ” ಎಂದು ಕೇಳಿದ್ದಾನೆ. 40 ಕಿಮೀ ದೂರದಿಂದ ಬಂದ ಆ್ಯಂಬುಲೆನ್ಸ್ ಚಾಲಕ ಸ್ಥಳಕ್ಕೆ ತಲುಪಿದಾಗ, ಕುಡುಕ “ನನಗೇನು ಆಗಿಲ್ಲ, ನಿಮಗೆ ಸಾಧ್ಯವಾದರೆ ನನ್ನನ್ನು ಹಿಡಿಯಿರಿ!” ಎಂದು ಸವಾಲು ಹಾಕಿದ್ದಾನೆ.
ಅವನ ವರ್ತನೆ ನೋಡಿದ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರಿಗೆ ಕೂಡಾ “ನನ್ನನ್ನು ಹಿಡಿಯಬಹುದು ಅಂದ್ರೆ ಹಿಡಿದು ತೋರಿಸಿ!” ಎಂದು ಸವಾಲು ಹಾಕಿದ ಕುಡುಕನನ್ನು ವಶಕ್ಕೆ ಪಡೆಯಲು ಅವರು ಹರಸಾಹಸ ಪಟ್ಟಿದ್ದಾರೆ. ಕೊನೆಗೆ ಸ್ಥಳೀಯರ ಸಹಾಯದಿಂದ ಅವನನ್ನು ಹಿಡಿದು ಪೊಲೀಸರು ಕೊಂಡೊಯ್ದಿದ್ದಾರೆ. ಅಷ್ಟರಲ್ಲೇ ಆತ “ತಪ್ಪಾಯ್ತು ಸರ್, ಬಿಟ್ಟು ಬಿಡಿ ಸರ್!” ಎಂದು ಬೇಡಿಕೊಳ್ಳಲು ಶುರುಮಾಡಿದ್ದಾನೆ.
ಈ ಅವಾಂತರಕ್ಕೆ ಬಾಳೆಹೊನ್ನೂರಿನಿಂದ 108 ಆ್ಯಂಬುಲೆನ್ಸ್ ಚಾಲಕ ನಿರರ್ಥಕವಾಗಿ 40 ಕಿಮೀ ದೂರ ಪ್ರಯಾಣ ಮಾಡಬೇಕಾಯಿತು.