
ಮಂಗಳೂರು : ಮಂಗಳೂರು ನಗರಕ್ಕೆ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ‘ಪ್ರಧಾನಮಂತ್ರಿ ಇ-ಬಸ್ ಸೇವಾ’ ಯೋಜನೆಯಡಿ 100 ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ಮಂಜೂರು ಮಾಡಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಮುಡಿಪು ಕಂಬಳಪದವಿನಲ್ಲಿ ನೂತನವಾಗಿ ನಿರ್ಮಾಣಗೊಂಡ ವಿದ್ಯುನ್ಮಾನ ವಾಹನ ಚಾಲನಾ ಪರೀಕ್ಷಾ ಪಥಗಳ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತಿದೆ. ಇದರ ಭಾಗವಾಗಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ಕರ್ನಾಟಕಕ್ಕೆ ಒಟ್ಟು 750 ಎಲೆಕ್ಟ್ರಿಕ್ ಬಸ್‌ಗಳು ಮಂಜೂರಾಗಿದ್ದು, ಅದರಲ್ಲಿ ಮಂಗಳೂರಿಗೆ 100 ಬಸ್‌ಗಳು ಲಭಿಸಿವೆ ಎಂದು ಮಾಹಿತಿ ನೀಡಿದರು. ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರ್ಗಿ, ಮೈಸೂರು, ಶಿವಮೊಗ್ಗ ಸೇರಿದಂತೆ ರಾಜ್ಯದ 10 ನಗರಗಳಿಗೆ ತಲಾ 100 ಎಲೆಕ್ಟ್ರಿಕ್ ಬಸ್‌ಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು. ಈ ಬಸ್‌ಗಳು ಶೀಘ್ರದಲ್ಲೇ ಮಂಗಳೂರಿನ ವಿವಿಧ ಮಾರ್ಗಗಳಲ್ಲಿ ಸಂಚರಿಸಲಿವೆ ಎಂದು ಚೌಟ ತಿಳಿಸಿದರು.
ಈ ಎಲೆಕ್ಟ್ರಿಕ್ ಬಸ್‌ಗಳ ನಿರ್ವಹಣೆಗೆ ಸೂಕ್ತ ಚಾರ್ಜಿಂಗ್ ಸ್ಟೇಷನ್‌ಗಳು, ಬಸ್ ಡಿಪೋಗಳು ಮತ್ತು ನಿರ್ವಹಣಾ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳು ಬೇಕಾಗಿವೆ. ಈ ಕುರಿತು ಕೆಎಸ್‌ಆರ್‌ಟಿಸಿ ಮಂಗಳೂರಿನಲ್ಲಿ ಸೂಕ್ತ ಜಾಗ ಗುರುತಿಸಬೇಕೆಂದು ಚೌಟ ಒತ್ತಿ ಹೇಳಿದರು. ಇತ್ತೀಚೆಗೆ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಮೂಲಸೌಕರ್ಯ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿರುವುದಾಗಿ ತಿಳಿಸಿದರು. ಅಲ್ಲದೆ, ರಾಜ್ಯ ಸಾರಿಗೆ ಇಲಾಖೆಯು ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸುವಂತೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಚಿವ ರಾಮಲಿಂಗಾ ರೆಡ್ಡಿ ಅವರಿಗೂ ಕ್ಯಾ. ಚೌಟ ಮನವಿ ಮಾಡಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.
ಮಂಗಳೂರಿಗೆ 100 ಬಸ್‌ಗಳನ್ನು ಮಂಜೂರು ಮಾಡಿದ ಕೇಂದ್ರ ಸರ್ಕಾರಕ್ಕೆ, ನಿರ್ದಿಷ್ಟವಾಗಿ ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್, ಇಲಾಖಾ ಅಧಿಕಾರಿಗಳು ಮತ್ತು ಪರಿಸರ ಸ್ನೇಹಿ ಸಾರಿಗೆಗೆ ಒತ್ತು ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕ್ಯಾ. ಚೌಟ ಅವರು ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು.