
ಬೆಂಗಳೂರು: ಸಿಎಂ ಬದಲಾವಣೆ ವಿಚಾರದಲ್ಲಿ ಇಂದು ನಿರ್ಣಾಯಕ ಬೆಳವಣಿಗೆ ನಡೆದಿದೆ. “ಮುಂದಿನ ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ” ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ ಬೆನ್ನಲ್ಲೇ ಡಿಪ್ಟಿ ಸಿಎಂ ಡಿಕೆ ಶಿವಕುಮಾರ್ ಅವರು ಕೂಡ ಸ್ಪಂದಿಸಿ, “ನನಗೆ ಬೇರೆ ದಾರಿ ಇಲ್ಲ. ನಾನು ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತೇನೆ” ಎಂದು ಹೇಳಿದ್ದಾರೆ.
ನಂದಿ ಗಿರಿಧಾಮದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಹೈಕಮಾಂಡ್ ತೀರ್ಮಾನದಂತೆ ಮುಂದಿನ ಐದು ವರ್ಷಗಳ ಕಾಲ ಅವರು ಅಧಿಕಾರದಲ್ಲಿರುತ್ತಾರೆ ಎಂದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, “ನಾನು ಪಕ್ಷದ ತೀರ್ಮಾನಕ್ಕೆ ಬದ್ಧನಾಗಿ ಕೆಲಸ ಮಾಡುತ್ತೇನೆ. ಹೈಕಮಾಂಡ್ ಏನು ತೀರ್ಮಾನಿಸಿದರೂ ನಾನು ಅದನ್ನು ಗೌರವಿಸುತ್ತೇನೆ” ಎಂದು ಹೇಳಿದ್ದಾರೆ.
ಸಿದ್ದರಾಮಯ್ಯನವರ ಸಿಎಂ ಹುದ್ದೆಗೆ ಬೆಂಬಲ ಸೂಚಿಸಿರುವ ಡಿಕೆ ಶಿವಕುಮಾರ್ ತಮ್ಮ ಬೆಂಬಲಿಗರಿಗೂ “ಸಿದ್ದರಾಮಯ್ಯ ಸಿಎಂ ಆಗಿದ್ದಾರೆ, ಯಾರೂ ಅಪಸ್ವರ ಎತ್ತಬೇಡಿ.” ಎಂದು ಕಿವಿಮಾತು ನೀಡಿದ್ದಾರೆ.
ಇತ್ತ ಕಾಂಗ್ರೆಸ್ ಪಕ್ಷದ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಅವರು ಬೆಂಗಳೂರಿನಲ್ಲಿ ಶಾಸಕರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸುತ್ತಿದ್ದು, ಈ ಬೆಳವಣಿಗೆಗಳು ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ. ಡಿಕೆಶಿಯ ಈ ‘ಬ್ಯಾಕ್ಫುಟ್’ ತೀರ್ಮಾನದಿಂದ ಅವರ ಭವಿಷ್ಯದ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.