
ಬೆಂಗಳೂರು: ರಾಜ್ಯಸಭಾ ಸದಸ್ಯ ಹಾಗೂ ಪದ್ಮವಿಭೂಷಣ ಪುರಸ್ಕೃತ ಡಾ. ಡಿ. ವೀರೇಂದ್ರ ಹೆಗ್ಗಡೆ, ಅವರ ಕುಟುಂಬ ಮತ್ತು ಧರ್ಮಸ್ಥಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಧಾರರಹಿತ ಮತ್ತು ಮಾನಹಾನಿಕರ ಆರೋಪಗಳಿಗೆ ಬೆಂಗಳೂರು ಸಿವಿಲ್ ಕೋರ್ಟ್ ಮಹತ್ವದ ತಡೆಯಾಜ್ಞೆ ನೀಡಿದೆ.
ಡಿ. ಹರ್ಷೇಂದ್ರ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಜಯ್ ಕುಮಾರ್ ಅವರಿದ್ದ ಏಕಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದೆ. ನ್ಯಾಯವಾದಿ ರಾಜಶೇಖರ ಹಿಲ್ಯಾರ್ ಅವರ ವಾದವನ್ನು ಆಲಿಸಿದ ನ್ಯಾಯಾಲಯ, ಅರ್ಜಿದಾರರ ಕುಟುಂಬ, ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ, ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರದ ಕುರಿತು ಯಾವುದೇ ರೀತಿಯಲ್ಲಿ ಮಾನಹಾನಿಕರ ಮತ್ತು ಸಾಕ್ಷ್ಯರಹಿತ ಆರೋಪಗಳನ್ನು ಒಳಗೊಂಡ ಹೇಳಿಕೆಗಳನ್ನು ಪ್ರಕಟಿಸದಂತೆ ನಿರ್ಬಂಧ ವಿಧಿಸಿದೆ. ಅಲ್ಲದೆ, ಈಗಾಗಲೇ ಯೂಟ್ಯೂಬ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿರುವ ಅಂತಹ ವಿಡಿಯೋಗಳನ್ನು ತಕ್ಷಣವೇ ತೆಗೆದುಹಾಕುವಂತೆ ಆದೇಶ ನೀಡಿದೆ.
ಈ ಪ್ರಕರಣಕ್ಕೂ ಧರ್ಮಸ್ಥಳ ಕ್ಷೇತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಕ್ಷೇತ್ರದ ವತಿಯಿಂದ ನಡೆಯುತ್ತಿರುವ ಸಮಾಜಮುಖಿ ಕಾರ್ಯಗಳನ್ನು ಸಹಿಸದ ಕೆಲವು ದುಷ್ಟ ಶಕ್ತಿಗಳು, ಕ್ಷೇತ್ರದ ಏಳಿಗೆಯನ್ನು ತಡೆಯುವ ದುರುದ್ದೇಶದಿಂದ ಪೂರ್ವಾಗ್ರಹಪೀಡಿತರಾಗಿ ಈ ಪ್ರಕರಣವನ್ನು ಮುಂದಿಟ್ಟುಕೊಂಡು ಪವಿತ್ರ ಧರ್ಮಸ್ಥಳ ಕ್ಷೇತ್ರ, ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬದ ವಿರುದ್ಧ ಸುಳ್ಳು ಪ್ರಚಾರ ಮಾಡುವ ಮೂಲಕ ತೇಜೋವಧೆಗೆ ಯತ್ನಿಸುತ್ತಿವೆ ಎಂದು ಆರೋಪಿಸಲಾಗಿದೆ. ಇಂತಹ ಕೃತ್ಯಗಳಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಅರ್ಜಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ನ್ಯಾಯಾಲಯದ ಈ ಆದೇಶವು ಧಾರ್ಮಿಕ ಸಂಸ್ಥೆಗಳು ಮತ್ತು ವ್ಯಕ್ತಿಗಳ ವಿರುದ್ಧದ ಆಧಾರರಹಿತ ಪ್ರಚಾರಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.