
ಬೆಳ್ತಂಗಡಿ: ಹಲವಾರು ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಧರ್ಮಸ್ಥಳ ಪ್ರಕರಣದ ತನಿಖೆ ಮುಂದುವರೆದಿದೆ. ಆದರೆ, ಆಗಸ್ಟ್ 5ರಂದು ನಡೆಸಿದ ಶೋಧಕಾರ್ಯದಲ್ಲಿ ದೂರುದಾರರು ಗುರುತು ಮಾಡಿದ್ದ 11ನೇ ಸ್ಥಳದಲ್ಲಿ ಯಾವುದೇ ಕುರುಹು ಪತ್ತೆಯಾಗಿಲ್ಲ. ಸತ್ಯ ಶೋಧನೆಗಾಗಿ SIT ಅಧಿಕಾರಿಗಳು ಮತ್ತು ವಿವಿಧ ಇಲಾಖೆಯ ಸಿಬ್ಬಂದಿ ಜುಲೈ 11.30ರಿಂದ 1.55ರವರೆಗೆ ಪರಿಶೀಲನೆ ನಡೆಸಿದರೂ ಫಲಿತಾಂಶ ಶೂನ್ಯವಾಗಿದೆ. ಇದೀಗ 12ನೇ ಗುರುತು ಮಾಡಿದ ಜಾಗದಲ್ಲಿ ಕಾರ್ಯಾಚರಣೆ ಮುಂದುವರೆಯಲಿದೆ.
6ನೇ ಸ್ಥಳದಲ್ಲಿ ಪತ್ತೆಯಾದ ಅಸ್ಥಿಪಂಜರ ಪ್ರಕರಣ SITಗೆ ಹಸ್ತಾಂತರ
ಈ ನಡುವೆ, ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಹೊಸ ಬೆಳವಣಿಗೆಯೊಂದು ನಡೆದಿದೆ. ಜುಲೈ 31ರಂದು ದೂರುದಾರ ಗುರುತು ಮಾಡಿದ್ದ 6ನೇ ಜಾಗದಲ್ಲಿ ಪತ್ತೆಯಾಗಿದ್ದ ಅಸ್ಥಿಪಂಜರದ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಗಸ್ಟ್ 1ರಂದು SIT ತನಿಖಾಧಿಕಾರಿ ಐಪಿಎಸ್ ಜಿತೇಂದ್ರ ಕುಮಾರ್ ದಯಾಮ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಯುಡಿಆರ್ (ಅಸ್ವಾಭಾವಿಕ ಸಾವು) ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಈಗ, ಈ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಧರ್ಮಸ್ಥಳ ಪೊಲೀಸರು ಅಧಿಕೃತವಾಗಿ SIT ತಂಡಕ್ಕೆ ಹಸ್ತಾಂತರ ಮಾಡಲಿದ್ದಾರೆ. ಈಗಾಗಲೇ ಪತ್ತೆಯಾದ ಅಸ್ಥಿಪಂಜರಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಮುಂದಿನ ತನಿಖೆಗಾಗಿ SIT ತಂಡ ಅಧಿಕೃತವಾಗಿ ಕಾರ್ಯಾಚರಣೆ ನಡೆಸಲಿದೆ.