
ಮುಂಬಯಿ: ನಟಿ ಮತ್ತು ಸೋಶಿಯಲ್ ಮೀಡಿಯಾ ಪ್ರಭಾವಿ ಏಂಜೆಲ್ ರಾಯ್ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಅಸಭ್ಯ ಸಂದೇಶಗಳು ಹಾಗೂ ಕೊಲೆ ಬೆದರಿಕೆ ಕಳುಹಿಸಿರುವ ಬಗ್ಗೆ ಬಂಗೂರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಾರ್ಚ್ 16ರಂದು ನಟಿಯ ಇನ್‌ಸ್ಟಾಗ್ರಾಮ್ ಖಾತೆಗೆ ಅಪರಿಚಿತ ವ್ಯಕ್ತಿ ಅಶ್ಲೀಲ ಸಂದೇಶಗಳು ಮತ್ತು ಜೀವ ಬೆದರಿಕೆ ಇದ್ದ ಇಮೇಲ್ ಕಳುಹಿಸಿದ್ದಾನೆ. “ನಿನ್ನನ್ನು ಜೀವಂತವಾಗಿ ಸುಟ್ಟು ಹಾಕುತ್ತೇನೆ, ತುಂಡು ತುಂಡುಗಳಾಗಿ ಕತ್ತರಿಸುತ್ತೇನೆ” ಎಂಬ ರೀತಿಯ ಸಂದೇಶಗಳು ಬಂದಿವೆ ಎಂದು ನಟಿ ಪೊಲೀಸರಿಗೆ ದೂರು ನೀಡಿದ್ದಾರೆ.
ನಟಿಯ ಪ್ರಕಾರ, 2023ರ ಆಗಸ್ಟ್ ಮತ್ತು 2024ರ ಮಾರ್ಚ್ ತಿಂಗಳಲ್ಲಿಯೂ ಈ ರೀತಿಯ ಬೆದರಿಕೆಗಳು ಬಂದಿದ್ದವು. ಆಗ ಕೆಲವು ಖಾತೆಗಳನ್ನು ಬ್ಲಾಕ್ ಮಾಡಿದ್ದರೂ, ಹೊಸ ಖಾತೆಗಳ ಮೂಲಕ ಮತ್ತಷ್ಟು ಸಂದೇಶಗಳು ಬಂದಿದ್ದರಿಂದ ಈ ಬಾರಿ ಎಫ್‌ಐಆರ್ ದಾಖಲಿಸಿದ್ದಾರೆ.
ಏಂಜೆಲ್ ರಾಯ್ ಹಲವಾರು ಮ್ಯೂಸಿಕ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದು, ಶೀಘ್ರವೇ ‘ಘೋಟಾಲಾ’ ವೆಬ್ ಸೀರೀಸ್ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಸದ್ಯ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಸೈಬರ್ ಕ್ರೈಂ ತಂಡವೂ ತನಿಖೆಯಲ್ಲಿ ಸಕ್ರಿಯವಾಗಿದೆ.