
ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಆಡಳಿತಾವಧಿಯ ಹಲವಾರು ವಿದ್ಯಮಾನಗಳು ಕಾಂಗ್ರೆಸ್ ಹಿಂದೂ ವಿರೋಧಿ ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಬಜೆಟ್ ನಲ್ಲಿ ಒಂದೇ ಕೋಮಿನ ಅತಿಯಾದ ಓಲೈಕೆಗೆ ನೀಡಿರುವ ಪ್ರಾಶಸ್ತ್ಯ, ಜಾತಿ ಗಣತಿಯ ಗುಮ್ಮ, ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಜನಿವಾರಕ್ಕೆ ಕತ್ತರಿ ಪ್ರಯೋಗ ಸಹಿತ ಅಲ್ಲಲ್ಲಿ ನಡೆಯುತ್ತಿರುವ ವಿಛಿದ್ರಕಾರಿ ಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಆಡಳಿತ ವೈಫಲ್ಯಗಳನ್ನು ಮರೆಮಾಚಲು ರೂಪಿಸಿರುವ ಹಿಡನ್ ಅಜೆಂಡಾಗಳೆ? ಎಂಬ ಅನುಮಾನ ದಟ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಿಇಟಿ ಪರೀಕ್ಷಾ ಕೊಠಡಿಗೆ ಪ್ರವೇಶಿಸುವಾಗ ಜನಿವಾರವನ್ನು ತೆಗೆದಿರಿಸಬೇಕು ಎಂಬ ಲಿಖಿತ ನಿಯಮ ಇಲ್ಲದಿದ್ದರೂ ಬೀದರ್, ಸಾಗರ, ಶಿವಮೊಗ್ಗ ಮತ್ತು ಧಾರವಾಡದಲ್ಲಿ ಜನಿವಾರ ಧಾರಣೆಯನ್ನು ವಿರೋಧಿಸಿ, ಕೆಲವೆಡೆ ಜನಿವಾರವನ್ನು ಕತ್ತರಿಸಿ ಕೈಗೆ ನೀಡಿದ ಅಮಾನವೀಯ ಘಟನೆ ನಡೆದಿರುವುದು ಅತ್ಯಂತ ಖಂಡನೀಯ.
ಈ ನೆಲದ ಸಂಸ್ಕೃತಿ, ಸಂಸ್ಕಾರದ ಮೇಲೆ ನಡೆದಿರುವ ದೌರ್ಜನ್ಯದ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಹಾಗೂ ಶಾಶ್ವತ ಪರಿಹಾರಕ್ಕೆ ತಜ್ಞರ ಸಮಿತಿ ರಚನೆಗೆ ಸರಕಾರ ಬದ್ದ ಎಂಬ ಮಾತುಗಳನ್ನಾಡಿದ್ದರೂ ಘಟನೆಯ ಮೂಲದ ಜಾಡು ಹಿಡಿಯುವ ನಿಟ್ಟಿನಲ್ಲಿ ಆಮೂಲಾಗ್ರ ತನಿಖೆ ಅತ್ಯಗತ್ಯ.
ಯಾವುದೇ ವ್ಯಕ್ತಿಯ ಮೌಖಿಕ ಆದೇಶವಿಲ್ಲದೆ ಹಲವಾರು ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವ ಇಂತಹ ವಿಲಕ್ಷಣ ಘಟನೆ ನಡೆಯಲು ಕಾರಣವೇನು ಎಂಬ ಕುರಿತು ಕೂಲಂಕುಷ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಕಾನೂನಾತ್ಮಕ ಶಿಕ್ಷೆಗೆ ಒಳಪಡಿಸಬೇಕು ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯ ಮೂಲಕ ಸರಕಾರವನ್ನು ಆಗ್ರಹಿಸಿದ್ದಾರೆ.