
“ಸಾರ್ವತ್ರಿಕ ಮಕ್ಕಳ ಹುಟ್ಟುಹಬ್ಬ ಆಚರಣೆ ಭಾವನಾತ್ಮಕ ಭಾವನೆಗಳನ್ನು ಹೊರಹಾಕಿದ್ದಷ್ಟೇ ಅಲ್ಲ, ರಾಷ್ಟ್ರೀಯತೆಯನ್ನು ಮೆರೆಯುವ ಕೆಲಸವೂ ಮಾಡಿದೆ” – ವಿಕ್ರಂ ಹೆಗ್ಡೆ
“ಹೆಣ್ಣು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು. ಅನೇಕ ಸ್ವಾತಂತ್ರ್ಯ ಹೋರಾಟಗಾರ್ತಿಯರು ನಮ್ಮೊಳಗೇ ಇದ್ದಾರೆ” – ಶ್ರೀಮತಿ ರಮಿತಾ ಶೈಲೇಂದ್ರ

ಗ್ರಾಮ ವಿಕಾಸ (ಉಡುಪಿ ಜಿಲ್ಲೆ) ಮತ್ತು ನಚಿಕೇತ ವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಬೈಲೂರು ಶಾಲೆಯಲ್ಲಿ ಮೂರು ದಿನಗಳ ಚಿಣ್ಣರ ಸಂಸ್ಕಾರ ಶಿಬಿರ ಆಯೋಜಿಸಲಾಯಿತು. ಶಾಲಾ ಸಂಸ್ಥಾಪಕರಾದ ಮಚ್ಚೇಂದ್ರನಾಥ್ ಅವರ ನೇತೃತ್ವದಲ್ಲಿ ಶಿಬಿರ ಉದ್ಘಾಟನೆಗೊಂಡು, ಶಿಬಿರಾರ್ಥಿ ಮಕ್ಕಳ ಸಾರ್ವತ್ರಿಕ ಹುಟ್ಟುಹಬ್ಬ ಆಚರಣೆಯೊಂದಿಗೆ ಸಮಾರೋಪ ಕಾರ್ಯಕ್ರಮ ಜರುಗಿತು.
ಮಕ್ಕಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವ ಮೂಲಕ ಶಿಬಿರದಲ್ಲಿ ಕಲಿತ ರಾಷ್ಟ್ರೀಯತೆಯ ಭಾವನೆಗಳನ್ನು ಉಜ್ಜೀವನಗೊಳಿಸಿದರು. ಪೋಷಕರು ಮಕ್ಕಳಿಗೆ ಆರತಿ ಎತ್ತಿ, ಅರ್ಚನೆ ಮಾಡಿ ಆಶೀರ್ವದಿಸುವ ಮೂಲಕ ಭಾವನಾತ್ಮಕ ಸಂಬಂಧವನ್ನು ಬೆಳೆಸಿದರು, ಇದರಿಂದ ಶಿಬಿರಕ್ಕೆ ಮತ್ತಷ್ಟು ಮೆರುಗು ಸೇರಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜಕೀಯ ಮುಖಂಡ ಹಾಗೂ ಸಮಾಜಸೇವಕರಾದ ವಿಕ್ರಂ ಹೆಗ್ಡೆ ಅವರು, “ನಚಿಕೇತ ವಿದ್ಯಾಲಯವು ಮಕ್ಕಳಲ್ಲಿ ರಾಷ್ಟ್ರೀಯತೆಯ ಭಾವನೆಗಳನ್ನು ಬೆಳೆಸುವ ಕಾರ್ಯ ಮಾಡುತ್ತಿದೆ. ಪೋಷಕರು ತಮ್ಮ ಮಕ್ಕಳಿಗೆ ನೆರಳಾಗಿ ನಿಲ್ಲುವಂತಹ ಇಂತಹ ಶಾಲೆಗಳು ಇನ್ನಷ್ಟು ಹೆಚ್ಚಾಗಿ ಸ್ಥಾಪನೆ ಆಗಲಿ” ಎಂದು ಅಭಿಪ್ರಾಯಪಟ್ಟರು.
“ಹಿಂದೂ ಹುಟ್ಟುಹಬ್ಬದ ಅವಶ್ಯಕತೆ ಮತ್ತು ಅದರ ವೈಶಿಷ್ಟ್ಯ” ಕುರಿತು ಶ್ರೀಮತಿ ರಮಿತಾ ಶೈಲೇಂದ್ರ ವಿವರಿಸಿದರು. ಕಾರ್ಯಕ್ರಮವನ್ನು ಶಾಲಾ ಮಾತಾಜಿ ವಿದ್ಯಾ ನಿರೂಪಿಸಿದರು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಕವಿತಾ ಮತ್ತು ಮಾತೃ ಮಂಡಳಿಯ ಅಧ್ಯಕ್ಷೆ ದೀಕ್ಷಿತಾ ರಾವ್ ಉಪಸ್ಥಿತರಿದ್ದರು.