
ಬೆಂಗಳೂರು: ಉತ್ತರ ಕರ್ನಾಟಕದ ಖ್ಯಾತ ರಂಗಭೂಮಿ ಕಲಾವಿದ ಮತ್ತು ಚಲನಚಿತ್ರ ಹಾಸ್ಯನಟ, ಧಾರವಾಡ ರಂಗಾಯಣ ನಿರ್ದೇಶಕರಾಗಿದ್ದ ರಾಜು ತಾಳಿಕೋಟೆ (61) ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ರಾಜು ತಾಳಿಕೋಟಿಯವರ ಮೂಲ ಹೆಸರು ರಾಜೇಸಾಬ ಮಕ್ತುಮಸಾಬ್ ತಾಳಿಕೋಟಿ. ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದವರಾದ ಅವರು, ಚಿತ್ರರಂಗದಲ್ಲಿ ಪ್ರಸಿದ್ಧರಾದ ನಂತರ ತಾಳಿಕೋಟಿ ನಗರದಲ್ಲಿ ವಾಸವಾಗಿದ್ದರು. ಅವರು ಇಬ್ಬರು ಪತ್ನಿಯರು, ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ರಂಗಭೂಮಿಯಲ್ಲಿ ಅಜರಾಮರ
ಉತ್ತರ ಕರ್ನಾಟಕದ ವೃತ್ತಿ ರಂಗಭೂಮಿಯಲ್ಲಿ ರಾಜು ತಾಳಿಕೋಟೆಯವರು ‘ಕಲಿಯುಗ ಕುಡಕ’, ‘ಕುಡುಕರ ಸಾಮ್ರಾಜ್ಯ’ ಸೇರಿದಂತೆ ಹತ್ತಾರು ನಾಟಕಗಳ 78 ಸಾವಿರಕ್ಕೂ ಅಧಿಕ ಪ್ರಯೋಗಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು.
ಕಳೆದ ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, ‘ಪಂಚರಂಗಿ’ ಚಿತ್ರದಲ್ಲಿ ಉತ್ತರ ಕರ್ನಾಟಕದ ಭಾಷೆಯ ಪಾತ್ರ ನಿರ್ವಹಿಸಿ ಯಶಸ್ಸು ಪಡೆದಿದ್ದರು. ಅಲ್ಲಿಂದ ಸುಮಾರು 35ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.
ಉಡುಪಿಯಲ್ಲಿ ದುರ್ಘಟನೆ
ಪ್ರಸ್ತುತ ಧಾರವಾಡ ರಂಗಾಯಣ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಸಿನೆಮಾವೊಂದರ ಚಿತ್ರೀಕರಣಕ್ಕಾಗಿ ಕಳೆದ ವಾರ ಉಡುಪಿ ಜಿಲ್ಲೆಗೆ ಪ್ರಯಾಣ ಬೆಳೆಸಿದ್ದರು. ಅಲ್ಲಿ ಹೃದಯಾಘಾತದಿಂದ ಅವರು ಅಸುನೀಗಿದ್ದಾರೆ.
ಮೃತರ ಅಂತ್ಯಕ್ರಿಯೆಯು ಅವರ ಹುಟ್ಟೂರು ವಿಜಯಪುರ ಜಿಲ್ಲೆಯಲ್ಲಿ ನಡೆಯಲಿದ್ದು, ಅದಕ್ಕೂ ಮುನ್ನ ಅಂತಿಮ ದರ್ಶನಕ್ಕಾಗಿ ನಾಳೆ (ಅ. 14) ಧಾರವಾಡ ರಂಗಾಯಣದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಅವರ ನಿಧನಕ್ಕೆ ಧಾರವಾಡದ ಹಿರಿಯ ಕಲಾವಿದರು ಮತ್ತು ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.