
ಬೀಜಿಂಗ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದಿಂದ ರಫ್ತು ಆಗುವ ಸರಕುಗಳ ಮೇಲೆ ಶೇ.104ರಷ್ಟು ಸುಂಕ ವಿಧಿಸಿರುವುದಕ್ಕೆ ಪ್ರತಿಯಾಗಿ ಚೀನಾ ಇದೀಗ ಭಾರತದತ್ತ ಸ್ನೇಹ ಹಸ್ತ ಚಾಚಿದೆ. ಚೀನಾದ ವಿದೇಶಾಂಗ ಸಚಿವೆ ವಾಂಗ್ ಇ ಅವರು ಭಾರತ ಹಾಗೂ ಚೀನಾದ ನಡುವಿನ ವ್ಯಾಪಾರ ಸಂಬಂಧಗಳು ಉತ್ತಮವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಟ್ರಂಪ್ ಘೋಷಣೆಯ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, “ಚೀನಾ ತನ್ನ ನೆರೆಯ ರಾಷ್ಟ್ರಗಳೊಂದಿಗೆ ಬಾಂಧವ್ಯವನ್ನು ಗಟ್ಟಿ ಮಾಡುವುದು ಅವಶ್ಯಕ” ಎಂದು ಹೇಳಿದ್ದಾರೆ. ಬುಧವಾರ ಚೀನಾದ ವಿವಿಧ ದೇಶಗಳ ರಾಯಭಾರಿಗಳೊಂದಿಗೆ ಸಭೆ ನಡೆಸಿದ ಅವರು, ಆಧುನಿಕ ಯುಗದಲ್ಲಿ ಚೀನಾ ಮತ್ತು ನೆರೆಯ ರಾಷ್ಟ್ರಗಳು ಹೇಗೆ ನಡೆದುಕೊಳ್ಳಬೇಕು ಎಂಬ ಕುರಿತು ಮಾರ್ಗದರ್ಶನ ನೀಡಿದ್ದಾರೆ. ಚೀನಾದ ವ್ಯಾಪಾರ ಸಂಬಂಧಿತ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದೇ ಸಂದರ್ಭ ಭಾರತದಲ್ಲಿರುವ ಚೀನಾದ ರಾಯಭಾರಿ ಯೂ ಜಿಂಗ್ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಭಾರತ–ಚೀನಾದ ನಡುವಿನ ವ್ಯಾಪಾರ ಸಂಬಂಧ ಗಟ್ಟಿಯಾಗುತ್ತಿದೆ. ಜಾಗತಿಕ ಆರ್ಥಿಕತೆಯಲ್ಲಿ ಚೀನಾ ಶೇ.30ರಷ್ಟು ಕೊಡುಗೆ ನೀಡುತ್ತಿದೆ. ಜಾಗತಿಕ ವ್ಯಾಪಾರದಲ್ಲಿ ಏಕಸ್ವಾಮ್ಯತೆಯ ವಿರುದ್ಧ ಎಲ್ಲಾ ರಾಷ್ಟ್ರಗಳು ಒಟ್ಟಾಗಿ ನಿಲ್ಲಬೇಕು” ಎಂದು ಹೇಳಿದ್ದಾರೆ.
ಭಾರತದ ಪ್ರತಿಕ್ರಿಯೆ: ಖಾಸಗಿ ಸುದ್ದಿಸಂಸ್ಥೆ ಆಯೋಜಿಸಿದ ಸಂವಾದದಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್, “ಭಾರತ–ಚೀನಾ ಸಂಬಂಧ ಈಗ ಸಕಾರಾತ್ಮಕವಾಗಿದೆ. ಗಡಿವಿವಾದಗಳು ನಿವಾರಣೆಯ ಹಂತದಲ್ಲಿವೆ. ಉಭಯ ದೇಶಗಳ ನಡುವೆ ವಿಮಾನ ಸಂಚಾರ ಪುನರಾರಂಭವಾಗಿದೆ. ಮಾನಸ ಸರೋವರ ಯಾತ್ರೆಗೆ ಚೀನಾ ಅನುಮತಿ ನೀಡಿದೆ” ಎಂದು ಸ್ಪಷ್ಟಪಡಿಸಿದರು.