
ಕೊಟ್ಟಿಗೆಹಾರ: ಚಾರ್ಮಾಡಿ ಘಾಟ್‌ನ ಕಡಿದಾದ ತಿರುವುಗಳಲ್ಲಿ ಪ್ರವಾಸಿಗರಿದ್ದ ಟೆಂಪೋ ಟ್ರಾವೆಲರ್ (TT) ವಾಹನವೊಂದು ಶನಿವಾರ ಪಲ್ಟಿಯಾಗಿದ್ದು, ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಒಟ್ಟು 9 ಮಂದಿ ಗಾಯಗೊಂಡಿದ್ದು, ಓರ್ವ ಪ್ರವಾಸಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಈ ಟಿಟಿ ವಾಹನವು ಭದ್ರಾವತಿಯಿಂದ ಧರ್ಮಸ್ಥಳದತ್ತ ಪ್ರಯಾಣಿಸುತ್ತಿತ್ತು. ಚಾರ್ಮಾಡಿ ಘಾಟ್‌ನ 10ನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಾಹನ ರಸ್ತೆಯಲ್ಲೇ ಉರುಳಿಬಿದ್ದಿದೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಹಾಗೂ ಇತರ ವಾಹನ ಸವಾರರು ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಾಳುಗಳನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಘಟನೆಯಿಂದಾಗಿ ಘಾಟ್ ಪ್ರದೇಶದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.



































