
‘ಕಾಂತಾರ: ಚಾಪ್ಟರ್ 1’ : ಬಹು ನಿರೀಕ್ಷಿತ ಕನ್ನಡ ಚಲನಚಿತ್ರ ‘ಕಾಂತಾರ: ಚಾಪ್ಟರ್ 1’ ವಿಶ್ವಾದ್ಯಂತ ಅಕ್ಟೋಬರ್ 2 ರಂದು ತೆರೆಗೆ ಅಪ್ಪಳಿಸಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಗಲ್ಲಾಪೆಟ್ಟಿಗೆಯಲ್ಲಿ ₹55 ಕೋಟಿ ಗಳಿಕೆ ದಾಖಲಿಸುವುದರೊಂದಿಗೆ, ಈ ಚಿತ್ರವು ಬ್ಲಾಕ್ ಬಸ್ಟರ್ ಆರಂಭವನ್ನು ಕಂಡಿದೆ.
ಪ್ರೀಮಿಯರ್ ಶೋಗಳು ಮತ್ತು ಬಿಡುಗಡೆಯ ಮೊದಲ ದಿನದ ಒಟ್ಟು ಗಳಿಕೆ ₹55 ಕೋಟಿ ರೂಪಾಯಿ ಆಗಿದ್ದು, ಇದು ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಭಾರತದಾದ್ಯಂತ ಎಲ್ಲಾ ಭಾಷೆಗಳಿಂದ ಸುಮಾರು ₹45 ಕೋಟಿ ರೂಪಾಯಿಗಳ ಬೃಹತ್ ಗಳಿಕೆಯನ್ನು ಚಿತ್ರ ಮಾಡಿದೆ. ಇದರ ಜೊತೆಗೆ, ವಿದೇಶಿ ಮಾರುಕಟ್ಟೆಗಳಲ್ಲಿ ಸುಮಾರು ₹10 ಕೋಟಿ ರೂಪಾಯಿ ಗಳಿಸಿದ್ದು, ಅಮೆರಿಕವೊಂದರಲ್ಲೇ ಅಂದಾಜು ₹4.20 ಕೋಟಿ ರೂ. ಸಂಗ್ರಹವಾಗಿದೆ. ಸುಮಾರು 30 ದೇಶಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ.
ಸಿನಿಮಾದ ಕ್ರೇಜ್ ಎಷ್ಟು ಜೋರಾಗಿದೆ ಎಂದರೆ, ಪ್ರೀಮಿಯರ್ ಪ್ರದರ್ಶನಗಳು ಬುಧವಾರವೇ ದೇಶದ ಹಲವೆಡೆ ಹೌಸ್‌ಫುಲ್ ಆಗಿದ್ದವು. ಈ ಪ್ರೀಮಿಯರ್ ಶೋಗಳ ಯಶಸ್ಸು ಮತ್ತು ಉತ್ತಮ ಪ್ರಚಾರವು, ಅಧಿಕೃತ ಬಿಡುಗಡೆ ದಿನದಂದು ಸಿನಿಮಾ ಭರ್ಜರಿ ಪ್ರದರ್ಶನ ಕಾಣಲು ನೆರವಾಯಿತು. ವರದಿಗಳ ಪ್ರಕಾರ, ಈವರೆಗೆ 10 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿವೆ ಎಂದು ಅಂದಾಜಿಸಲಾಗಿದ್ದು, ಗುರುವಾರ ಪ್ರತಿ ಗಂಟೆಗೆ ಸುಮಾರು 60,000 ಟಿಕೆಟ್‌ಗಳು ಬಿಕರಿಯಾಗಿವೆ.
ಟಿಕೆಟ್ ದರಗಳು ಸಹ ಗಣನೀಯವಾಗಿ ಹೆಚ್ಚಿದ್ದವು. ದೆಹಲಿಯಲ್ಲಿ ಒಂದು ಟಿಕೆಟ್‌ಗೆ ಗರಿಷ್ಠ ₹2,400 ರೂ. ದಾಖಲಾಗಿದ್ದರೆ, ಬೆಂಗಳೂರಿನಲ್ಲಿ ಗರಿಷ್ಠ ದರ ₹1,200 ರೂ. ಇತ್ತು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದರೆ, ಸಿನಿಮಾ ಶುಕ್ರವಾರದ ವೇಳೆಗೆ ₹100 ಕೋಟಿ ಕ್ಲಬ್ ಸೇರುವ ನಿರೀಕ್ಷೆಯಿದೆ. ಈ ಭರ್ಜರಿ ಆರಂಭವು ಚಿತ್ರದ ಭವಿಷ್ಯದ ಕಲೆಕ್ಷನ್‌ಗೆ ಭದ್ರ ಬುನಾದಿ ಹಾಕಿದೆ.



































