
ನವದೆಹಲಿ: ಭಾರತದ ಆರ್ಥಿಕ ಇತಿಹಾಸದಲ್ಲಿ ಇಂದು ಒಂದು ಮಹತ್ವದ ದಿನ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ರ ಹಣಕಾಸು ವರ್ಷದ ಪೂರ್ಣಪ್ರಮಾಣದ ಕೇಂದ್ರ ಬಜೆಟ್ ಅನ್ನು ಇಂದು ಅಂದರೆ, ಫೆಬ್ರವರಿ 1, 2026 ರಂದು ಬೆಳಿಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಕಳೆದ ಒಂದು ದಶಕದಲ್ಲೇ ಇದೇ ಮೊದಲ ಬಾರಿಗೆ ಭಾನುವಾರದಂದು ಬಜೆಟ್ ಮಂಡನೆಯಾಗುತ್ತಿರುವುದು ವಿಶೇಷ. ಸತತ 9 ಬಾರಿ ಬಜೆಟ್ ಮಂಡಿಸುವ ಮೂಲಕ ಸೀತಾರಾಮನ್ ಅವರು ಹೊಸ ದಾಖಲೆಗೆ ಸಾಕ್ಷಿಯಾಗಲಿದ್ದಾರೆ.
ಈ ಬಾರಿಯ ಆಯವ್ಯಯವು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಸಕ್ತ ಅವಧಿಯ ಅತ್ಯಂತ ನಿರ್ಣಾಯಕ ಬಜೆಟ್ ಎನ್ನಲಾಗಿದೆ. ಕಳೆದ ವರ್ಷ ಮಧ್ಯಮ ವರ್ಗದವರಿಗೆ ಆದಾಯ ತೆರಿಗೆಯಲ್ಲಿ ದೊಡ್ಡ ಮಟ್ಟದ ರಿಯಾಯಿತಿ ನೀಡಲಾಗಿತ್ತು. ಈ ಬಾರಿ ಸರ್ಕಾರವು ಕೇವಲ ಜನಪ್ರಿಯ ಯೋಜನೆಗಳಿಗೆ ಸೀಮಿತವಾಗದೆ, ದೇಶದ ಒಟ್ಟಾರೆ ಆರ್ಥಿಕ ಪ್ರಗತಿ ಮತ್ತು ಸುಸ್ಥಿರತೆಯ ಮೇಲೆ ಹೆಚ್ಚಿನ ಗಮನ ಹರಿಸುವ ಸಾಧ್ಯತೆ ಇದೆ.
ಮುಖ್ಯವಾಗಿ ರಕ್ಷಣೆ, ಹಸಿರು ಇಂಧನ (Green Energy), ಮತ್ತು ಆರೋಗ್ಯ ಕ್ಷೇತ್ರಗಳಿಗೆ ಈ ಬಾರಿ ಬಂಪರ್ ಅನುದಾನ ಸಿಗುವ ನಿರೀಕ್ಷೆಯಿದೆ. ಇದರೊಂದಿಗೆ ಹೂಡಿಕೆದಾರರ ಕಣ್ಣು ಚಿನ್ನ ಮತ್ತು ಬೆಳ್ಳಿಯ ಮೇಲಿದ್ದು, ಆಮದು ಸುಂಕದಲ್ಲಿ ಬದಲಾವಣೆಯಾಗಲಿದೆಯೇ ಎಂಬ ಕುತೂಹಲ ಮನೆಮಾಡಿದೆ. ರೈತರು, ಮಹಿಳೆಯರು ಹಾಗೂ ಉದ್ಯೋಗಾಕಾಂಕ್ಷಿ ಯುವಜನತೆಗೆ ಪೂರಕವಾದ ಯೋಜನೆಗಳು ಘೋಷಣೆಯಾಗಲಿವೆ ಎಂಬ ಆಶಯ ವ್ಯಕ್ತವಾಗಿದೆ. ಬಜೆಟ್ ಹಿನ್ನೆಲೆಯಲ್ಲಿ ಇಂದು ಭಾನುವಾರವಾಗಿದ್ದರೂ ಸಹ ಷೇರು ಮಾರುಕಟ್ಟೆಗಳು (NSE ಮತ್ತು BSE) ಎಂದಿನಂತೆ ವಹಿವಾಟು ನಡೆಸಲಿವೆ.



































