
ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರ ಮಹೇಶ್ ಆಸ್ಪತ್ರೆ ಸಮೀಪ ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಇತ್ತೀಚೆಗೆ ನಡೆದ ಭೀಕರ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ. ಈ ಘಟನೆಗೆ ಜನರ ಆಕ್ರೋಶ ಹೆಚ್ಚಿದ್ದು, ಬುಧವಾರ ಬೃಹತ್ ಪ್ರತಿಭಟನೆ ನಡೆಯಿತು.
ಮಂಗಳವಾರ ನಡೆದ ಅಪಘಾತಕ್ಕೆ ಪ್ರತಿಯಾಗಿ, ಬ್ರಹ್ಮಾವರ ಎಸ್.ಎಮ್.ಎಸ್ ಕಾಲೇಜಿನಿಂದ ತಾಲೂಕು ಕಛೇರಿ ತನಕ ಶಾಂತಿಯುತ ಜಾಥಾ ನಡೆಸಿ, ಬಳಿಕ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಸ್ಥಳೀಯರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳು ಭಾಗವಹಿಸಿ, ಸಮರ್ಪಕ ಸರ್ವಿಸ್ ರಸ್ತೆ ಮತ್ತು ಫ್ಲೈ ಓವರ್ ನಿರ್ಮಾಣಕ್ಕೆ ಆಗ್ರಹಿಸಿದರು.
“ಇದು ಕೇವಲ ಆರಂಭ, ಜಿಲ್ಲಾಡಳಿತ ಎಚ್ಚರಿಸಿಕೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯ!” ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ವಸಂತ ಗಿಳಿಯಾರ್ ಅವರು, “ನ್ಯಾಯಕ್ಕಾಗಿ ಕೇವಲ ಘೋಷಣೆಗಳು ಸಾಕಾಗುವುದಿಲ್ಲ, ಏಪ್ರಿಲ್ 12ರೊಳಗೆ ತೀರ್ಮಾನ ಕೈಗೊಳ್ಳದಿದ್ದರೆ ಬ್ರಹ್ಮಾವರ ಬಂದ್ ಅನಿವಾರ್ಯ!” ಎಂದು ಘೋಷಿಸಿದರು.

ತಹಶೀಲ್ದಾರ್ ಸ್ಪಂದನೆ:
ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ ಮನವಿ ಸ್ವೀಕರಿಸಿ, “ಈ ವಿಷಯವನ್ನು ಜಿಲ್ಲಾಧಿಕಾರಿಯ ಗಮನಕ್ಕೆ ತಂದಿದ್ದು, ತಕ್ಷಣವೇ ಸರ್ವೀಸ್ ರಸ್ತೆ ನಿರ್ಮಾಣದ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಭರವಸೆ ನೀಡಿದರು.
ಈ ಪ್ರತಿಭಟನೆಯಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ್, ಎಸ್ಎಂಎಸ್ ಕಾಲೇಜು ಪ್ರಿನ್ಸಿಪಾಲ್ ರಾಬರ್ಟ್, ಫಾದರ್ ಮಥಾಯ್, ಫಾದರ್ ಡೇವಿಡ್ ಕ್ರಾಸ್ತಾ, ವಿದ್ಯಾರ್ಥಿಗಳು, ಹಿರಿಯ ನಾಗರಿಕ ವೇದಿಕೆ, ರೋಟರಿ, ಲಯನ್ಸ್ ಸೇರಿದಂತೆ 25ಕ್ಕೂ ಹೆಚ್ಚು ಸಂಘಟನೆಗಳು ಭಾಗವಹಿಸಿದ್ದವು.