
ಬೆಂಗಳೂರು: ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಬಿಎಂಟಿಸಿ ಬಸ್‌ಗಳ ಅಬ್ಬರ ಮುಂದುವರಿದಿದ್ದು, ಅತಿ ವೇಗದ ಚಾಲನೆಗೆ ಮತ್ತೊಂದು ಬಲಿಯಾಗಿದೆ. ನಗರದ ಟಿನ್ ಫ್ಯಾಕ್ಟರಿ ಜಂಕ್ಷನ್ ಹಾಗೂ ಕೆ.ಆರ್. ಪುರಂ ರೈಲ್ವೆ ನಿಲ್ದಾಣದ ನಡುವಿನ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಣಿಪುರ ಮೂಲದ 20 ವರ್ಷದ ಹನ್ನಾ ಇನಕಾ ಎಂಬ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯ ವಿವರ:
ಶನಿವಾರ ಬೆಳಿಗ್ಗೆ ಸುಮಾರು 9:30 ರಿಂದ 10:00 ಗಂಟೆಯ ಅವಧಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಹನ್ನಾ ಇನಕಾ ಅವರು ತಮ್ಮ ಸ್ನೇಹಿತ ಶ್ರೀಕುನ್ ಸಬಾ ಇಂಕಾ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಸಿಲ್ಕ್ ಬೋರ್ಡ್ ಕಡೆಯಿಂದ ಅತಿ ವೇಗವಾಗಿ ಬಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್, ಯುವತಿ ಪ್ರಯಾಣಿಸುತ್ತಿದ್ದ ಸ್ಕೂಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸವಾರರು ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ದುರದೃಷ್ಟವಶಾತ್, ಹಿಂಬದಿ ಕುಳಿತಿದ್ದ ಹನ್ನಾ ಅವರು ನೇರವಾಗಿ ಬಸ್ಸಿನ ಮುಂಭಾಗದ ಚಕ್ರದ ಅಡಿಗೆ ಸಿಲುಕಿದ್ದಾರೆ. ಚಕ್ರವು ಆಕೆಯ ತಲೆಯ ಮೇಲೆ ಹರಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಪ್ರಾಣಪಕ್ಷಿ ಹಾರಿಹೋಗಿದೆ. ಸ್ಕೂಟರ್ ಚಲಾಯಿಸುತ್ತಿದ್ದ ಶ್ರೀಕುನ್ ಸಬಾ ಇಂಕಾ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬದುಕು ಅರಸಿ ಬಂದವಳು ಹೆಣವಾದಳು:
ಮೂಲತಃ ಮಣಿಪುರದವರಾದ ಹನ್ನಾ, ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನ ಮಾರತಹಳ್ಳಿಯಲ್ಲಿ ವಾಸವಿದ್ದರು. ನಗರದ ಸ್ಪಾ ಒಂದರಲ್ಲಿ ಉದ್ಯೋಗಿಯಾಗಿದ್ದ ಇವರು, ಜೀವನೋಪಾಯಕ್ಕಾಗಿ ಇಲ್ಲಿಗೆ ಬಂದು ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದರು. ಆದರೆ ವಿಧಿಯಾಟ ಚಾಲಕನ ಅಜಾಗರೂಕತೆಯ ರೂಪದಲ್ಲಿ ಬಂದು ಆಕೆಯ ಕನಸುಗಳನ್ನು ನುಚ್ಚುನೂರು ಮಾಡಿದೆ.
ಸಾರ್ವಜನಿಕರ ಆಕ್ರೋಶ:
ಟಿನ್ ಫ್ಯಾಕ್ಟರಿ ಪ್ರದೇಶವು ಈಗಾಗಲೇ ವಾಹನ ದಟ್ಟಣೆಯಿಂದಾಗಿ ‘ಡೆತ್ ಟ್ರ್ಯಾಪ್’ ಎಂದು ಕುಖ್ಯಾತಿ ಪಡೆದಿದೆ. ಘಟನೆಯ ನಂತರ ಸ್ಥಳೀಯರು ಮತ್ತು ಸಾರ್ವಜನಿಕರು ಬಿಎಂಟಿಸಿ ಚಾಲಕರ ಬೇಜವಾಬ್ದಾರಿತನದ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಮಹದೇವಪುರ ಸಂಚಾರ ಠಾಣೆಯ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್. ಪುರಂ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬಸ್ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ನಿರ್ಲಕ್ಷ್ಯದ ಚಾಲನೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.




































