
ಬೆಂಗಳೂರು: ಕರ್ನಾಟಕ ರಾಜ್ಯ ಬಿಜೆಪಿಯಲ್ಲಿ ಹೊಗೆಯಾಡುತ್ತಿದ್ದ ಆಂತರಿಕ ಭಿನ್ನಮತ ಹಾಗೂ ನಾಯಕರ ವೈಯಕ್ತಿಕ ಅಸಮಾಧಾನಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಗಂಭೀರ ಹೆಜ್ಜೆ ಇಟ್ಟಿದೆ. ರಾಜ್ಯ ಬಿಜೆಪಿ ಉಸ್ತುವಾರಿಯಾದ ರಾಧಾಮೋಹನ್ ಅಗರ್ವಾಲ್ ಅವರು ಸರಣಿ ಸಭೆಗಳನ್ನು ನಡೆಸುವ ಮೂಲಕ ನಾಯಕರ ನಡುವಿನ ಮುನಿಸನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಖ್ಯವಾಗಿ ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಹಾಗೂ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರನ್ನು ಮುಖಾಮುಖಿಯಾಗಿಸಿ, ಇಬ್ಬರ ನಡುವಿನ ಶೀತಲ ಸಮರಕ್ಕೆ ಸದ್ಯ ಪೂರ್ಣವಿರಾಮ ಇಡಲಾಗಿದೆ.
ಇದಕ್ಕೂ ಮುನ್ನ ನಡೆದ ಪಕ್ಷದ ಕೋರ್ ಕಮಿಟಿ ಸಭೆಯ ಸಂದರ್ಭದಲ್ಲಿಯೂ ಸಹಪ್ರಭಾರಿ ಸುಧಾಕರ್ ರೆಡ್ಡಿ ಅವರು ನಾಯಕರನ್ನು ಕರೆದು ಸಮಾಲೋಚನೆ ನಡೆಸಿದ್ದರು. ಯಾವುದೇ ಕಾರಣಕ್ಕೂ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂತಹ ಬಹಿರಂಗ ಹೇಳಿಕೆಗಳನ್ನು ನೀಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಇದರ ಮುಂದುವರಿದ ಭಾಗವಾಗಿ ಗುರುವಾರ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಉಸ್ತುವಾರಿ ಅಗರ್ವಾಲ್ ಅವರು ಉಭಯ ನಾಯಕರ ಅಹವಾಲುಗಳನ್ನು ಪ್ರತ್ಯೇಕವಾಗಿ ಆಲಿಸಿ, ನಂತರ ಒಟ್ಟಿಗೆ ಕೂರಿಸಿ ಸಂಧಾನ ಪ್ರಕ್ರಿಯೆ ಪೂರ್ಣಗೊಳಿಸಿದರು. ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಅವರೊಂದಿಗೂ ಮಾತುಕತೆ ನಡೆಸಿ ಗೊಂದಲಗಳನ್ನು ಬಗೆಹರಿಸಲಾಗಿದೆ.
ಮುಖ್ಯಾಂಶಗಳು
- ರಾಧಾಮೋಹನ್ ಅಗರ್ವಾಲ್ ಮಧ್ಯಸ್ಥಿಕೆ: ರಾಜ್ಯ ಬಿಜೆಪಿ ಉಸ್ತುವಾರಿ ಸರಣಿ ಸಭೆಗಳ ಮೂಲಕ ನಾಯಕರ ವೈಯಕ್ತಿಕ ಮುನಿಸು ಶಮನಗೊಳಿಸಿದರು.
- ಸುಧಾಕರ್-ವಿಶ್ವನಾಥ್ ಒಂದಾಗಲು ಸಮ್ಮತಿ: ಹಳೆಯ ಕಹಿ ಘಟನೆಗಳನ್ನು ಮರೆತು ಸಂಘಟಿತರಾಗಿ ಕೆಲಸ ಮಾಡಲು ಇಬ್ಬರೂ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ.
- ಬಹಿರಂಗ ಹೇಳಿಕೆಗೆ ಬ್ರೇಕ್: ಪಕ್ಷದ ಆಂತರಿಕ ವಿಷಯಗಳನ್ನು ಮಾಧ್ಯಮಗಳ ಮುಂದೆ ಚರ್ಚಿಸದಂತೆ ಹೈಕಮಾಂಡ್ ಕಟ್ಟುನಿಟ್ಟಿನ ವಾರ್ನಿಂಗ್ ನೀಡಿದೆ.
- ಡಿವಿಎಸ್-ರೇಣುಕಾಚಾರ್ಯ ಸಭೆ: ಆಡಿಯೋ ವಿವಾದದ ಹಿನ್ನೆಲೆಯಲ್ಲಿ ಇಬ್ಬರೂ ನಾಯಕರಿಂದ ಪ್ರತ್ಯೇಕ ವಿವರಣೆ ಪಡೆದ ಉಸ್ತುವಾರಿ.
- ಯತ್ನಾಳ್ ಖಡಕ್ ನಿಲುವು: ಯಾವುದೇ ಸಂಧಾನ ಸಭೆಯಲ್ಲಿ ಭಾಗಿಯಾಗಿಲ್ಲ ಎಂದು ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟನೆ.
ಹೆಚ್ಚಿನ ವಿವರಗಳು ಹಾಗೂ ನಾಯಕರ ಪ್ರತಿಕ್ರಿಯೆ:
ಸಂಧಾನ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಎಸ್.ಆರ್. ವಿಶ್ವನಾಥ್, ಹಿರಿಯ ನಾಯಕರ ಸಲಹೆಯಂತೆ ಹಳೆಯ ಭಿನ್ನಾಭಿಪ್ರಾಯಗಳನ್ನು ಸಂಪೂರ್ಣವಾಗಿ ಕೈಬಿಟ್ಟು ಒಟ್ಟಾಗಿ ಮುನ್ನಡೆಯಲು ತೀರ್ಮಾನಿಸಿದ್ದೇವೆ. ನಮ್ಮ ನೆನಪಿನ ಬುತ್ತಿಯಿಂದ ಹಿಂದಿನ ಕಹಿ ಘಟನೆಗಳನ್ನು ಡಿಲೀಟ್ ಮಾಡಿದ್ದೇವೆ ಎಂದು ಮಾರ್ಮಿಕವಾಗಿ ನುಡಿದರು. ಇತ್ತ ಸಂಸದ ಡಾ. ಕೆ. ಸುಧಾಕರ್ ಮಾತನಾಡಿ, ಪಕ್ಷದ ಹಿತದೃಷ್ಟಿಯಿಂದ ಹಾಗೂ ನಮ್ಮ ಭಾಗದಲ್ಲಿ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಒಟ್ಟಾಗಿ ಹೋಗಲು ಸೂಚಿಸಲಾಗಿದೆ. ಭಿನ್ನಾಭಿಪ್ರಾಯಗಳು ಪಕ್ಷದ ಮೇಲೆ ಪರಿಣಾಮ ಬೀರಬಾರದು ಎಂಬ ಹಿರಿಯರ ಮಾತಿಗೆ ಗೌರವ ನೀಡಿದ್ದೇವೆ ಎಂದರು.
ಇದೇ ವೇಳೆ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಕೇಳಿಬಂದಿದ್ದ ಆಡಿಯೋ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಮತ್ತು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೂ ಪ್ರತ್ಯೇಕ ಸಭೆ ನಡೆಸಿ ಅಗರ್ವಾಲ್ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ತಾವು ಸದಾನಂದಗೌಡರ ವಿರುದ್ಧ ಮಾತನಾಡಿಲ್ಲ, ವಿಜಯೇಂದ್ರ ಅವರ ಸಂಘಟನಾ ಚಾತುರ್ಯದ ಬಗ್ಗೆ ಮಾತ್ರ ಪ್ರಸ್ತಾಪಿಸಿದ್ದು, ಈ ಬಗ್ಗೆ ಪ್ರಭಾರಿಗಳಿಗೆ ಸೂಕ್ತ ದಾಖಲೆ ನೀಡಿದ್ದೇನೆ ಎಂದರು. ಆದರೆ, ಮತ್ತೊಂದೆಡೆ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತ್ರ, ನಿರ್ದಿಷ್ಟ ಕುಟುಂಬ ರಾಜಕಾರಣ ಪಕ್ಷದಿಂದ ಹೊರಹೋಗುವವರೆಗೂ ತಾವು ಯಾವುದೇ ಸಂಧಾನಕ್ಕೂ ಬದ್ಧರಿಲ್ಲ ಎಂದು ತಮ್ಮ ಪಟ್ಟು ಮುಂದುವರಿಸಿದ್ದಾರೆ.



































