
ಬೆಂಗಳೂರು: ಬಜೆಟ್ ಅಧಿವೇಶನದ ಕೊನೆಯ ದಿನ ಅಮಾನತುಗೊಳಗಾದ 18 ಶಾಸಕರ ವಿರುದ್ಧದ ಆದೇಶ ಹಿಂಪಡೆಯುವಂತೆ ಆಗ್ರಹಿಸಿ, ಬಿಜೆಪಿ ನಿಯೋಗ ಸ್ಪೀಕರ್ ಯು.ಟಿ. ಖಾದರ್ ಅವರನ್ನು ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಿದೆ. ಸ್ಪೀಕರ್ ಅವರು ಕಾನೂನು ಸಚಿವರ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.
ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಯಲಹಂಕ ಶಾಸಕ ವಿಶ್ವನಾಥ್, ಬೈರತಿ ಬಸವರಾಜ್, ಸಿ.ಕೆ. ರಾಮಮೂರ್ತಿ, ಬಿ.ಪಿ. ಹರೀಶ್ ಹಾಗೂ ಮುನಿರತ್ನ ಸೇರಿದ್ದ ನಿಯೋಗ ಸ್ಪೀಕರ್ ಅವರನ್ನು ಅರ್ಧ ತಾಸುಗೂ ಹೆಚ್ಚು ಸಮಯ ಭೇಟಿಯಾಗಿ ಚರ್ಚೆ ನಡೆಸಿತು.
ವಿಧಾನಸಭೆಯ ನಿಯಮಾವಳಿ 348ರ ಪ್ರಕಾರ, ಶಾಸಕರ ಅಮಾನತು ಅಥವಾ ಆ ಆದೇಶ ಹಿಂಪಡೆಯುವ ಪ್ರಕ್ರಿಯೆ ಕೇವಲ ಸದನ ನಡೆಯುತ್ತಿರುವಾಗ ಮಾತ್ರ ಸಾಧ್ಯ. ಆದರೆ ಈ ಘಟನೆ ಅಧಿವೇಶನದ ಕೊನೆಯ ದಿನ ನಡೆದಿದ್ದು, ಸ್ಪೀಕರ್ ಲಿಖಿತ ಆದೇಶದ ಮೂಲಕ ಹಿಂಪಡೆಯುವ ಅವಕಾಶವಿಲ್ಲ. ಜೊತೆಗೆ, ಸಮಿತಿ ಸಭೆಗಳಿಗೂ ಈ ಅಮಾನತು ಅನ್ವಯವಾಗಲಿದೆ ಎಂದು ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆರ್. ಅಶೋಕ್: “ಸ್ಪೀಕರ್ ಸ್ಪಂದನೆ ಧನಾತ್ಮಕವಾಗಿದ್ದು, ಕಾನೂನು ಸಚಿವರ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಭರವಸೆ ನೀಡಿದ್ದಾರೆ. ಈ ಹಿಂದೆ ಇಂತಹ ಪ್ರಕರಣಗಳು ನಡೆದಿದ್ದರೂ 6 ತಿಂಗಳಷ್ಟು ದೀರ್ಘ ಅಮಾನತು ನಡೆದಿಲ್ಲ.”
ವಿಶ್ವನಾಥ್ (ಯಲಹಂಕ ಶಾಸಕ): “ಸಮಿತಿಗೆ ಹಾಜರಾಗಬಾರದೆಂಬ ನಿರ್ಧಾರ ಸರಿಯಲ್ಲ. ಟಿಎ-ಡಿಎ ಕೂಡ ನಿಲ್ಲಿಸಿರುವುದು ಕಾನೂನುಬದ್ಧವಲ್ಲ. ನಾವು ಎಲ್ಲವನ್ನೂ ಇಲ್ಲಿ ಬಗೆಹರಿಸಬೇಕೆಂದು ಮನವಿ ಮಾಡಿದ್ದೇವೆ.”
ಬೈರತಿ ಬಸವರಾಜ್: “ಅಮಾನತು ಆದೇಶ ಹಿಂಪಡೆಯುವ ನಿರೀಕ್ಷೆಯಿದೆ. ಹಿಂಪಡೆಯದಿದ್ದರೆ ಮುಂದಿನ ಕ್ರಮವನ್ನು ನಾಯಕರು ನಿರ್ಧರಿಸುತ್ತಾರೆ.”