
ಬಳ್ಳಾರಿ : ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರವಾಗಿ ಆರಂಭವಾದ ಗಲಾಟೆ ಈಗ ಕಾನೂನು ಸಮರದ ರೂಪ ಪಡೆದುಕೊಂಡಿದೆ. ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಸೇರಿದಂತೆ ಒಟ್ಟು 22 ಜನರ ವಿರುದ್ಧ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ದೂರಿನ ಹಿನ್ನೆಲೆ:
ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಜಿ. ಜನಾರ್ದನ ರೆಡ್ಡಿ ಅವರ ಮನೆಯ ಕೆಲಸದ ವ್ಯಕ್ತಿ ನಾಗರಾಜ್ ಎಂಬುವವರು ಈ ದೂರು ನೀಡಿದ್ದಾರೆ. ಜನಾರ್ದನ ರೆಡ್ಡಿ ಅವರ ನಿವಾಸಕ್ಕೆ ಅತಿಕ್ರಮ ಪ್ರವೇಶ ಮಾಡಿರುವುದು, ಜಾತಿ ನಿಂದನೆ ಮಾಡಿರೋದು ಮತ್ತು ಹಲ್ಲೆಗೆ ಯತ್ನಿಸಿರುವ ಗಂಭೀರ ಆರೋಪಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಗಳ ಪಟ್ಟಿ:
ಈ ಪ್ರಕರಣದಲ್ಲಿ ಶಾಸಕ ಭರತ್ ರೆಡ್ಡಿ ಅವರಲ್ಲದೆ, ಅವರ ಆಪ್ತ ಬೆಂಬಲಿಗರಾದ ಸತೀಶ್ ರೆಡ್ಡಿ, ಚಾನಾಳ ಶೇಖರ್, ಲೋಕೇಶ್ ಅವಂಬಾವಿ, ಗಂಗಾಧರ ಸೇರಿದಂತೆ ಒಟ್ಟು 22 ಜನರ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ.
ದೂರು-ಪ್ರತಿದೂರುಗಳ ಸರಣಿ:
ಈ ಗಲಾಟೆಗೆ ಸಂಬಂಧಿಸಿದಂತೆ ಈಗಾಗಲೇ ಚಾನಾಳ ಶೇಖರ್ ಎಂಬುವವರು ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಸೇರಿದಂತೆ 11 ಜನರ ವಿರುದ್ಧ ದೂರು ನೀಡಿದ್ದರು. ಇದಕ್ಕೆ ಪ್ರತಿಯಾಗಿ ಈಗ ಜನಾರ್ದನ ರೆಡ್ಡಿ ಬೆಂಬಲಿಗರು ದೂರು ದಾಖಲಿಸಿದ್ದಾರೆ.
ಬ್ಯಾನರ್ ವಿಚಾರವಾಗಿ ಆರಂಭವಾದ ಈ ವಿವಾದವು ಈಗ ಜಿಲ್ಲೆಯಲ್ಲಿ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದ್ದು, ಪೊಲೀಸರು ಬಿಗಿ ಭದ್ರತೆ ವಹಿಸಿದ್ದಾರೆ.
































