
ನವದೆಹಲಿ: ದೇಶದ ಭದ್ರತೆಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಕ್ರಮವೊಂದನ್ನು ಕೈಗೊಂಡಿದೆ. ಇದೀಗ ಸೇನಾ ಮತ್ತು ಭದ್ರತಾ ಪಡೆಗಳ ಕಾರ್ಯಾಚರಣೆ ಸಂಬಂಧಿತ ನೇರ ಪ್ರಸಾರ ಹಾಗೂ ತಕ್ಷಣದ ವರದಿ (ರಿಯಲ್ ಟೈಮ್ ಕವರೇಜ್)ಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಈ ಕುರಿತು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಸ್ಪಷ್ಟ ನಿರ್ದೇಶನ ನೀಡಿ, ಎಲ್ಲಾ ಮಾಧ್ಯಮ ಸಂಸ್ಥೆಗಳಿಗೆ ಅಧಿಕೃತ ಸೂಚನಾ ಪತ್ರವನ್ನೇ ಬಿಡುಗಡೆ ಮಾಡಿದೆ. ಇದರ ಮೂಲಕ, ಭದ್ರತಾ ಕಾರ್ಯಾಚರಣೆ ಕುರಿತ “ಮೂಲಗಳ ಪ್ರಕಾರ” ಎನ್ನುವ ನಮೂನೆಯ ವರದಿಗಳನ್ನು ಸಹ ಅನಧಿಕೃತವೆಂದು ಪರಿಗಣಿಸಲಾಗುತ್ತದೆ.
ರಾಷ್ಟ್ರೀಯ ಭದ್ರತೆ ಮತ್ತು ಜನರ ಸುರಕ್ಷತೆಯ ದೃಷ್ಟಿಯಿಂದ , ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸೇನಾ ಕಾರ್ಯಾಚರಣೆ ವೇಳೆ ನಡೆಯುವ ಸುದ್ದಿಯ ವಿಸ್ತೃತ ವರದಿ ಅಥವಾ ನೇರ ಪ್ರಸಾರದಿಂದ ದುಷ್ಪರಿಣಾಮ ಉಂಟಾಗಬಹುದೆಂಬ ಆತಂಕದಿಂದ, ಈ ನಿರ್ಬಂಧವನ್ನು ಹೇರಲಾಗಿದೆ.
ಕೇಂದ್ರ ಸರ್ಕಾರವು ಮಾಹಿತಿಯ ಸತ್ಯತೆ ಹಾಗೂ ಭದ್ರತಾ ಸಂಘಟನೆಗಳ ನಿರ್ವಹಣೆಯ ನಡುವೆ ಸಮತೋಲನ ಕಾಪಾಡಲು ಮಾಧ್ಯಮಗಳು ಜವಾಬ್ದಾರಿಯುತ ವರದಿ ಪ್ರಕ್ರಿಯೆ ಪಾಲಿಸಬೇಕೆಂದು ಸೂಚನೆ ನೀಡಿದೆ ಮತ್ತು ನಿಯಮ ಉಲ್ಲಂಘನೆಯಾದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.