
ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಶಾಂತಿ ಕದಡುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇತ್ತೀಚೆಗೆ ಇನ್ಸ್ಟಾಗ್ರಾಮ್‌ನಲ್ಲಿ ಪ್ರಚೋದನಕಾರಿ ಬರಹ ಹಂಚಿಕೊಂಡವರ ವಿರುದ್ಧ ಬಜ್ಪೆ ಪೊಲೀಸರು ಸ್ವಯಂ ಪ್ರೇರಿತ (Suo Motu) ದೂರು ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ: ಕಳೆದ ಡಿಸೆಂಬರ್ 27 ರಂದು ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನಾರ್ಲಪದವು ಎಂಬಲ್ಲಿ ಘಟನೆಯೊಂದು ನಡೆದಿತ್ತು. ಅಬ್ದುಲ್ ಸತ್ತಾರ್ ಎಂಬುವವರು ತಮ್ಮ ಮಗಳೊಂದಿಗೆ ಸ್ಕೂಟರ್‌ನಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದರು ಎನ್ನಲಾದ ವೇಳೆ, ಸುಮಿತ್ ಮತ್ತು ರಜತ್ ನಾಯಕ್ ಎಂಬ ಯುವಕರು ಅವರನ್ನು ತಡೆದು ಹಲ್ಲೆ ನಡೆಸಿದ್ದರು. ಈ ಕುರಿತು ಈಗಾಗಲೇ ಬಜ್ಪೆ ಠಾಣೆಯಲ್ಲಿ ಕಾನೂನು ಪ್ರಕ್ರಿಯೆ ನಡೆಯುತ್ತಿದೆ.
ಪ್ರಚೋದನಕಾರಿ ಪೋಸ್ಟ್ ಅಬ್ಬರ: ಈ ಘಟನೆಯನ್ನು ಆಧರಿಸಿ ಕೆಲವು ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಹಲ್ಲೆ ನಡೆಸಿದ ಆರೋಪಿಗಳ ಫೋಟೋಗಳನ್ನು ಹಾಕಿ, “ಸಂಘಿಗಳ ಅಟ್ಟಹಾಸಕ್ಕೆ ಕಡಿವಾಣ ಇಲ್ಲವೇ?” ಎಂಬರ್ಥದ ಬರಹಗಳನ್ನು ಪೋಸ್ಟ್ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಕಿಡಿಗೇಡಿಯೊಬ್ಬ, “ಇವರಿಗೆ ಸದ್ಯದಲ್ಲೇ ಸುಹಾಸ್ ಶೆಟ್ಟಿ ಟ್ರೀಟ್ ಮೆಂಟ್ ಕೊಡಬೇಕು” ಎಂದು ಕಮೆಂಟ್ ಮಾಡಿದ್ದಾನೆ. ಸುಹಾಸ್ ಶೆಟ್ಟಿ ಎಂಬುವವರು ಈ ಹಿಂದೆ ಕೊಲೆಯಾದ ರೌಡಿಶೀಟರ್ ಆಗಿದ್ದು, ಅವರ ಹೆಸರನ್ನು ಬಳಸಿಕೊಂಡು ಬೆದರಿಕೆ ಹಾಕಿದ್ದು ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ.
ಪೊಲೀಸರ ಬಿಗಿ ಕ್ರಮ: ಸಮಾಜದಲ್ಲಿ ಕೋಮು ದ್ವೇಷ ಹರಡುವ ಮತ್ತು ಹಳೆಯ ಹತ್ಯೆ ಪ್ರಕರಣಗಳನ್ನು ನೆನಪಿಸಿ ಬೆದರಿಕೆ ಒಡ್ಡುವ ಇಂತಹ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ಪೊಲೀಸರು, ಪೋಸ್ಟ್ ಮತ್ತು ಕಮೆಂಟ್ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಕಿಡಿಗೇಡಿಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.



































