
ಬಾಗಲಕೋಟೆ: ಜಿಲ್ಲೆಯ ನವನಗರದಲ್ಲಿರುವ ದಿವ್ಯ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ನೈತಿಕತೆ ಮರೆತ ಶಿಕ್ಷಕ ದಂಪತಿಗಳು ವಿಶೇಷ ಚೇತನ ಮಕ್ಕಳ ಮೇಲೆ ನಡೆಸುತ್ತಿದ್ದ ದೌರ್ಜನ್ಯದ ಭೀಕರ ಸತ್ಯವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಮೂಲಕ ಬಹಿರಂಗವಾಗಿದೆ.
ನವನಗರದ 54ನೇ ಸೆಕ್ಟರ್‌ನಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿನ ಶಿಕ್ಷಕ ಅಕ್ಷಯ್ ಇಂದೂಲ್ಕರ್ ಎಂಬುವವರು ರಕ್ಷಣೆ ಇಲ್ಲದ ಅಸಹಾಯಕ ಮಕ್ಕಳ ಮೇಲೆ ಬೆಲ್ಟ್ ಹಾಗೂ ಪ್ಲಾಸ್ಟಿಕ್ ಪೈಪ್‌ಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಈ ರಾಕ್ಷಸಿ ಕೃತ್ಯಕ್ಕೆ ಪತ್ನಿ ಮಾಲಿನಿ ಕೂಡ ಸಾಥ್ ನೀಡಿದ್ದು, ಕಿರುಚಾಡುತ್ತಿದ್ದ ಮಕ್ಕಳ ಕಣ್ಣಿಗೆ ಅತ್ಯಂತ ಅಮಾನವೀಯವಾಗಿ ಖಾರದ ಪುಡಿ ಎರಚುವ ಮೂಲಕ ಕ್ರೌರ್ಯ ಮೆರೆದಿದ್ದಾರೆ ಎಂದು ಆರೋಪಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ನವನಗರ ಪೊಲೀಸರು ಆರೋಪಿ ಶಿಕ್ಷಕ ದಂಪತಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಾಗಲಕೋಟೆ ಎಸ್‌ಪಿ ಸಿದ್ದಾರ್ಥ ಗೋಯಲ್ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ತನ್ನ ಕೃತ್ಯವನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ ಆರೋಪಿ ಅಕ್ಷಯ್, “ವಿದ್ಯಾರ್ಥಿ ಹೈಪರ್ ಆಗಿದ್ದ ಮತ್ತು ಬೇರೆಯವರಿಗೆ ತೊಂದರೆ ನೀಡುತ್ತಿದ್ದ ಕಾರಣ ಹೆದರಿಸಲು ಹೀಗೆ ಮಾಡಿದ್ದೇವೆಯೇ ಹೊರತು ಖಾರದ ಪುಡಿ ಹಾಕಿಲ್ಲ” ಎಂದು ಹಾರಿಕೆಯ ಉತ್ತರ ನೀಡಿದ್ದಾನೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಕ್ಷಣವೇ ದಂಪತಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. “ವಿಶೇಷ ಮಕ್ಕಳಿಗೆ ರಕ್ಷಣೆ ನೀಡಬೇಕಾದವರು ಇಂತಹ ಹೇಯ ಕೃತ್ಯವೆಸಗಿರುವುದು ಅಕ್ಷಮ್ಯ. ಇಬ್ಬರನ್ನೂ ಸೇವೆಯಿಂದ ಕಾಯಂ ಆಗಿ ಅಮಾನತುಗೊಳಿಸಲು ಆದೇಶಿಸಲಾಗಿದೆ. ಇಂತಹ ಕೃತ್ಯಗಳು ಮರುಕಳಿಸದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗುವುದು,” ಎಂದು ಅವರು ಭರವಸೆ ನೀಡಿದ್ದಾರೆ.



































