
ಆಂಧ್ರಪ್ರದೇಶ, ಗುಂಟೂರು: ಬಿ.ಟೆಕ್ ವಿದ್ಯಾರ್ಥಿನಿಯೊಬ್ಬಳು ಅಘೋರಿಯಾಗಲು ನಿರ್ಧರಿಸಿ ಮನೆ ಬಿಟ್ಟ ಘಟನೆ ನಡೆದಿದೆ. ಈ ಬೆಳವಣಿಗೆಯಿಂದ ಪೋಷಕರು ಆಘಾತಕ್ಕೊಳಗಾಗಿದ್ದು, ತಮ್ಮ ಮಗಳನ್ನು ಮರಳಿ ಮನೆಗೆ ತರುವಂತೆ ಪೊಲೀಸರಲ್ಲಿ ದೂರು ನೀಡಿದ್ದಾರೆ.
ಪ್ರಿಯದರ್ಶಿನಿ ಕಾಲೇಜಿನಲ್ಲಿ ಬಿ.ಟೆಕ್ ಓದುತ್ತಿರುವ ವಿದ್ಯಾರ್ಥಿನಿಗೆ ಕೆಲವು ದಿನಗಳ ಹಿಂದೆ ಮಂಗಳಗಿರಿಗೆ ಬಂದಿದ್ದ ಅಘೋರಿ ಮಹಿಳೆಯ ಸಂಪರ್ಕವಾಯಿತು. ಆಕೆ ವಿದ್ಯಾರ್ಥಿನಿಯ ಮನೆಯಲ್ಲಿ ಕೆಲವು ದಿನಗಳು ಉಳಿದಿದ್ದರಿಂದ ಅವರಿಬ್ಬರ ನಡುವೆ ಆಳವಾದ ಸಂಬಂಧ ಬೆಳೆದು, ಆಘೋರಿಗಳ ಜೀವನಶೈಲಿ ವಿದ್ಯಾರ್ಥಿನಿಯ ಮೇಲೆ ಪ್ರಭಾವ ಬೀರಿತು.
ಕಳೆದ ಎರಡು ದಿನಗಳ ಹಿಂದೆ, ವಿದ್ಯಾರ್ಥಿನಿ ಅಘೋರಿಯಾಗಲು ಹೈದರಾಬಾದ್‌ಗೆ ತೆರಳುತ್ತಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದರು. “ನಾನು ಮೇಜರ್, ನನ್ನ ನಿರ್ಧಾರ ಸ್ವತಂತ್ರ. ಆದರೆ, ನನ್ನ ಪೋಷಕರಿಗೆ ಇದು ಇಷ್ಟವಿಲ್ಲ” ಎಂದು ಹೇಳಿದ್ದಾರೆ.
ಇತ್ತ ಪೋಷಕರು ತೀವ್ರವಾಗಿ ನೋವುಗೊಂಡಿದ್ದು, ತಮ್ಮ ಮಗಳು ಅಘೋರಿಗಳ ಪ್ರಭಾವಕ್ಕೆ ಒಳಗಾಗಿ ಮನಸ್ಸು ಬದಲಾಯಿಸಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ. “ಅವಳು ಅವರ ಸೆರೆಯಲ್ಲಿ ಸಿಕ್ಕಿಬಿದ್ದಿದ್ದಾಳೆ, ದಯವಿಟ್ಟು ನಮ್ಮ ಮಗಳನ್ನು ನಮಗೆ ಹಿಂತಿರುಗಿಸಿ” ಎಂದು ವಿದ್ಯಾರ್ಥಿನಿಯ ತಂದೆ ಕೊಟಯ್ಯ ಕಣ್ಣೀರಿಡುತ್ತಾ ಬೇಡಿಕೊಂಡಿದ್ದಾರೆ.
ಈ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು, ವಿದ್ಯಾರ್ಥಿನಿಯ ನಿರ್ಧಾರ ಮತ್ತು ಪೋಷಕರ ಆಕ್ರಂದನದ ನಡುವೆ ಗೊಂದಲ ಮುಂದುವರಿದಿದೆ.