
ಕಾರ್ಕಳ : ತಾಲೂಕಿನ ನಿಟ್ಟೆ ಗ್ರಾಮದ ಅತ್ತೂರು ವಾಂಟ್ರಾಯಿ ಪದವಿನ ‘ಜನನಿ ಮಿತ್ರ ಮಂಡಳಿ (ರಿ)’ ಇದರ ರಜತ ಮಹೋತ್ಸವ ಸಂಭ್ರಮವು ಫೆಬ್ರವರಿ 14, 2026 ರ ಶನಿವಾರದಂದು ಅತ್ಯಂತ ಸಡಗರದಿಂದ ಜರುಗಲಿದೆ. ಮಂಡಳಿಯ ವಾರ್ಷಿಕೋತ್ಸವದ ಅಂಗವಾಗಿ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಯನ್ನೇ ಆಯೋಜಿಸಲಾಗಿದೆ.
ಶನಿವಾರ ಬೆಳಿಗ್ಗೆ 10 ಗಂಟೆಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಕಾರ್ಯಕ್ರಮಗಳು ಆರಂಭವಾಗಲಿವೆ. ಮಧ್ಯಾಹ್ನ 12.30 ಕ್ಕೆ ಮಹಾಪೂಜೆ ನೆರವೇರಲಿದ್ದು, ತದನಂತರ ಭಕ್ತಾದಿಗಳಿಗೆ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ ಭಜನಾ ಕಾರ್ಯಕ್ರಮಗಳು ಸಾಗಲಿದ್ದು, ಸಂಜೆ 4 ರಿಂದ 6 ರವರೆಗೆ ಸ್ಥಳೀಯ ಭಜನಾ ತಂಡಗಳಿಂದ ಆಕರ್ಷಕ ‘ಕುಣಿತ ಭಜನೆ’ ಜರುಗಲಿದೆ.
ಸಾಂಸ್ಕೃತಿಕ ವೈವಿಧ್ಯದ ಭಾಗವಾಗಿ ಸಂಜೆ 6 ಗಂಟೆಗೆ ಕಾರ್ಕಳದ ಪ್ರಸಿದ್ಧ ‘ತೆಲಿಕೆದ ತೆನಾಲಿ’ ತಂಡದಿಂದ ‘ಬಲಿ ತೆಲಿಪಾಲೆ’ ಹಾಸ್ಯ ರಸಮಂಜರಿ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಲಿದೆ. ನಂತರ ಸ್ಥಳೀಯ ಕಲಾವಿದರಿಂದ ಜಾನಪದ ನೃತ್ಯ ಹಾಗೂ ವಿವಿಧ ಕಲಾ ಪ್ರದರ್ಶನಗಳು ನಡೆಯಲಿವೆ. ರಾತ್ರಿ 8.30 ಕ್ಕೆ ಗುಂಡ್ಯಡ್ಕ ಹಿಂದೂ ರುದ್ರಭೂಮಿಯ ನವೀಕೃತ ಕಟ್ಟಡದ ಉದ್ಘಾಟನೆ ಹಾಗೂ ರಜತ ಮಹೋತ್ಸವದ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾತ್ರಿ 10 ಗಂಟೆಗೆ ಸಾಯಿಶಕ್ತಿ ಕಲಾ ಬಳಗದಿಂದ ‘ಜೋಡು ಜೀಟಿಗೆ’ ಎಂಬ ಪೌರಾಣಿಕ ತುಳು ನಾಟಕ ಪ್ರದರ್ಶನಗೊಳ್ಳುವ ಮೂಲಕ ವಾರ್ಷಿಕೋತ್ಸವಕ್ಕೆ ತೆರೆ ಬೀಳಲಿದೆ.



































