
ಹೊಸನಗರ: ರಾಜ್ಯದ ಪ್ರಮುಖ ಘಾಟ್‌ಗಳಲ್ಲಿ ಒಂದಾದ ಹುಲಿಕಲ್ ಘಾಟ್ (ಬಾಳೆಬರೆ) ರಸ್ತೆಯಲ್ಲಿ ಮತ್ತೆ ದೊಡ್ಡ ಪ್ರಮಾಣದ ಕುಸಿತ ಸಂಭವಿಸಿದ್ದು, ಇದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಮುಂದಿನ ಒಂದು ವಾರದೊಳಗೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸುವ ಸಾಧ್ಯತೆ ಇದೆ. ಈ ಕುಸಿತದಿಂದಾಗಿ ಅಗತ್ಯ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ.
ರಸ್ತೆಯ ಅಡಿಪಾಯವೇ ಕೊರೆತ
ಹುಲಿಕಲ್ ಘಾಟಿಯ ಹೇರ್ ಪಿನ್ ತಿರುವಿನಲ್ಲಿರುವ ಶ್ರೀ ಚಂಡಿಕಾಂಬ ದೇವಾಲಯದ ಕೆಳಭಾಗದಲ್ಲಿ ಭಾರೀ ಪ್ರಮಾಣದ ಭೂಕುಸಿತ ಸಂಭವಿಸಿದೆ. ಈ ಹಿಂದೆ, ಕುಸಿತ ತಡೆದು ಸಂಚಾರಕ್ಕೆ ಮುಕ್ತ ಮಾಡಲಾಗಿತ್ತು. ಆದರೆ, ಈಗ ಅದೇ ಜಾಗದಿಂದ ಸ್ವಲ್ಪ ಕೆಳಭಾಗದಲ್ಲಿ ರಸ್ತೆಯ ಅಡಿಪಾಯವೇ ಕೊರೆದು ಹೋಗಿದೆ. ಈ ಭಾಗದಲ್ಲಿ ರಸ್ತೆ ಸಂಪೂರ್ಣವಾಗಿ ಕುಸಿದಿದ್ದು, ಕಾಂಕ್ರೀಟ್ ರಸ್ತೆಯ ಮೇಲ್ಭಾಗ ಮಾತ್ರ ಉಳಿದಿದೆ. ಇದರ ಜೊತೆಗೆ, ಕಳೆದ ವಾರ ಬಾಳೆಬರೆ ಫಾಲ್ಸ್ ಬಳಿಯೂ ಭೂಕುಸಿತವಾಗಿದ್ದು, ತಾತ್ಕಾಲಿಕವಾಗಿ ಸಂಚಾರ ಬಂದ್ ಆಗಿತ್ತು. ಅವೈಜ್ಞಾನಿಕ ಕಾಮಗಾರಿಗಳು ಮತ್ತು ರಸ್ತೆಯ ಅಗಲೀಕರಣದ ಕಾರಣದಿಂದ ಈ ಪರಿಸ್ಥಿತಿ ಉಂಟಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾಧಿಕಾರಿಗಳ ಸೂಚನೆ
ಕುಸಿತದ ತೀವ್ರತೆ ಗಮನಿಸಿದ ಲೋಕೋಪಯೋಗಿ ಇಲಾಖೆಯು, ಬೃಹತ್ ವಾಹನಗಳ ಸಂಚಾರವನ್ನು ನಿಷೇಧಿಸುವುದು ಅನಿವಾರ್ಯ ಎಂದು ನಿರ್ಧರಿಸಿದೆ. ಈ ಕುರಿತು ಶಿವಮೊಗ್ಗ ಮತ್ತು ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಉಭಯ ಜಿಲ್ಲೆಗಳ ಪೊಲೀಸ್ ಇಲಾಖೆಗೆ ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚಿಸಲಾಗಿದೆ. ಪೊಲೀಸ್ ಇಲಾಖೆಯ ವರದಿ ಬಂದ ಬಳಿಕ ಸಂಚಾರ ನಿಷೇಧದ ಬಗ್ಗೆ ಅಧಿಕೃತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಪರ್ಯಾಯ ಮಾರ್ಗಗಳ ಸಮಸ್ಯೆ
ಹುಲಿಕಲ್ ಘಾಟ್, ಮಧ್ಯ ಕರ್ನಾಟಕ ಮತ್ತು ಕರಾವಳಿ ಭಾಗವನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ. ಇಲ್ಲಿ ಸಂಚಾರ ನಿಷೇಧವಾದರೆ, ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗುವುದು ಖಚಿತ. ಪರ್ಯಾಯ ಮಾರ್ಗಗಳಾದ ಆಗುಂಬೆ ಮತ್ತು ನಾಗೋಡಿ-ಕೊಲ್ಲೂರು ಘಾಟ್ಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಆಗುಂಬೆ ಘಾಟ್ ಬೃಹತ್ ವಾಹನಗಳಿಗೆ ಯೋಗ್ಯವಾಗಿಲ್ಲ. ಕೊಲ್ಲೂರು ಮಾರ್ಗವು ಹೆಚ್ಚು ಸುತ್ತಿ ಹೋಗಬೇಕಿರುವುದರಿಂದ ಸಮಯ ವ್ಯರ್ಥವಾಗುತ್ತದೆ. ಹೀಗಾಗಿ, ಭವಿಷ್ಯದ ದೃಷ್ಟಿಯಿಂದ ಘಾಟಿಗೆ ವೈಜ್ಞಾನಿಕ ಮತ್ತು ದೂರದೃಷ್ಟಿಯ ಕಾಮಗಾರಿಗಳ ಅಗತ್ಯವಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.