
ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ “ಅನ್ನಭಾಗ್ಯ” ಯೋಜನೆಯಡಿ ಆಹಾರಧಾನ್ಯ ಸಾಗಣೆಯಲ್ಲಿ ತೊಡಗಿರುವ ಲಾರಿ ಮಾಲಕರಿಗೆ ರಾಜ್ಯ ಸರ್ಕಾರ ಸುಮಾರು 250 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದರಿಂದ, ಸೋಮವಾರದಿಂದ (ಜುಲೈ 7, 2025) ಆಹಾರ ಧಾನ್ಯ ಸಾಗಾಣಿಕೆ ಲಾರಿಗಳ ಮುಷ್ಕರ ಆರಂಭವಾಗಿದೆ. ಸರ್ಕಾರ ಬಾಕಿ ಹಣ ಪಾವತಿಸುವವರೆಗೂ ಸುಮಾರು 4,500 ಲಾರಿಗಳನ್ನು ರಸ್ತೆಗಿಳಿಸುವುದಿಲ್ಲ ಎಂದು ಲಾರಿ ಮಾಲಕರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಲಾರಿ ಮಾಲಕರು ಹಾಗೂ ಏಜೆಂಟರ ಸಂಘದ ಅಧ್ಯಕ್ಷ ಮತ್ತು ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಜಿ.ಆರ್. ಷಣ್ಮುಗಪ್ಪ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ಕಳೆದ 5-6 ತಿಂಗಳಿಂದ ಸರ್ಕಾರ ಸಾಗಣೆ ವೆಚ್ಚ ನೀಡಿಲ್ಲ. ಆಹಾರ ಇಲಾಖೆಯಿಂದ 250 ಕೋಟಿ ರೂ. ಬಾಕಿ ಬರಬೇಕಿದೆ. ಇಡೀ ರಾಜ್ಯಕ್ಕೆ ಪ್ರತೀ ತಿಂಗಳು 4.50 ಲಕ್ಷ ಟನ್ ಆಹಾರ ಧಾನ್ಯಗಳನ್ನು ಲಾರಿಗಳ ಮೂಲಕ ಸಾಗಿಸಲಾಗುತ್ತದೆ. ಹಣ ಸಿಗದೆ ತೀವ್ರ ತೊಂದರೆಯಲ್ಲಿದ್ದೇವೆ” ಎಂದು ಅಳಲು ತೋಡಿಕೊಂಡಿದ್ದಾರೆ.
ಸರ್ಕಾರದ ಭರವಸೆ ಹುಸಿ: 15 ದಿನಗಳ ಗಡುವು ಮೀರಿತು ಜೂನ್ 19 ರಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಾರ್ಯದರ್ಶಿಗಳು ಲಾರಿ ಮಾಲಕರೊಂದಿಗೆ ಸಭೆ ನಡೆಸಿ, ಜೂನ್ 25ರ ಒಳಗೆ ಬಾಕಿ ನೀಡುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಹಣ ಬಿಡುಗಡೆಯಾಗದ ಕಾರಣ, ಗಡುವು ಮೀರಿದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಸುಮಾರು 3ರಿಂದ 4 ಸಾವಿರ ‘ಓನರ್ ಕಮ್ ಡ್ರೈವರ್’ಗಳಿಗೆ ಸಂಕಷ್ಟ ಎದುರಾಗಿದ್ದು, ಡೀಸೆಲ್ ವೆಚ್ಚ ಮತ್ತು ಇತರ ನಿರ್ವಹಣಾ ವೆಚ್ಚ ಭರಿಸಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಷಣ್ಮುಗಪ್ಪ ದೂರಿದ್ದಾರೆ.

ಮಾಲಕರ ಸಂಕಷ್ಟ: ಮನೆ-ಮಠ ಅಡವಿಡುವ ಪರಿಸ್ಥಿತಿ ರಾಜ್ಯದಲ್ಲಿ ಸುಮಾರು 4,500 ಲಾರಿಗಳು ಆಹಾರ ಧಾನ್ಯ ಸಾಗಣೆಯಲ್ಲಿ ತೊಡಗಿವೆ. ಇವುಗಳಲ್ಲಿ 1 ಸಾವಿರ ಲಾರಿಗಳು ಗುತ್ತಿಗೆ ಆಧಾರಿತವಾಗಿದ್ದರೆ, 3,500 ಲಾರಿಗಳು ಸ್ವಂತ ಮಾಲಕರದ್ದಾಗಿವೆ. 9 ತಿಂಗಳ ಹಿಂದೆ ಆಹಾರ ಧಾನ್ಯ ಪೂರೈಕೆ ಟೆಂಡರ್ ಕರೆಯಲಾಗಿದ್ದು, ಆಗ ಪ್ರತಿಯೊಬ್ಬ ಲಾರಿ ಮಾಲಕರು 4 ಲಕ್ಷ ರೂ. ಠೇವಣಿ ಹಣ ಕಟ್ಟಬೇಕಾಗಿತ್ತು. ಆ ಹಣ ಕಟ್ಟಿ ಟೆಂಡರ್ ಪಡೆದು ಆಹಾರ ಧಾನ್ಯ ಸಾಗಣೆ ಮಾಡಿದ ನಂತರವೂ ಸರ್ಕಾರ ಹಣ ಪಾವತಿಸದೆ ಬಾಕಿ ಉಳಿಸಿಕೊಂಡಿರುವುದು ಸರಿಯಲ್ಲ ಎಂದು ಲಾರಿ ಮಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಮಿಕರ ಇಎಸ್‌ಐ, ಪಿಎಫ್ ಹಣವನ್ನೂ ಕಟ್ಟಬೇಕಿದ್ದು, ಆ ಹಣವನ್ನೂ ಸರ್ಕಾರ ಪಾವತಿಸಿಲ್ಲ ಎಂಬುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಸಚಿವರ ಪ್ರತಿಕ್ರಿಯೆ: “ಸರ್ಕಾರದ ಬಳಿ ಹಣ ಇದ್ದು ಒಂದೆರಡು ದಿನಗಳಲ್ಲಿ ಬಿಡುಗಡೆಯಾಗಲಿದೆ. ಬಾಕಿಯಿರುವ ಎಲ್ಲ ಬಿಲ್ ಪಾವತಿ ಮಾಡಲಾಗುವುದು. ಲಾರಿ ಮಾಲಕರು ಭಯಪಡುವ ಅಗತ್ಯವಿಲ್ಲ” ಎಂದು ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ.